ಪ್ರಪಂಚದಾದ್ಯಂತ ಕೊರೊನಾ ವಿರುದ್ಧದ ಹೋರಾಟ ಮುಂದುವರೆದಿದೆ. ಕೊರೊನಾಗೆ ಲಸಿಕೆ ಕಂಡು ಹಿಡಿಯುವ ಪ್ರಯತ್ನ ನಡೆದಿದೆ. ಕೊರೊನಾ ಸೋಲಿಸಲು ವಿಜ್ಞಾನಿಗಳು ಇನ್ನಿಲ್ಲದ ಕಸರತ್ತು ಮಾಡ್ತಿದ್ದಾರೆ. ಈ ಮಧ್ಯೆ ಭಾರತ ಹಾಗೂ ಇಸ್ರೇಲ್ ವಿಜ್ಞಾನಿಗಳು ಕೊರೊನಾ ಪತ್ತೆಯ ಹೊಸ ವಿಧಾನ ಕಂಡು ಹಿಡಿದಿದ್ದಾರೆ.
ಈ ಸಾಧನದಲ್ಲಿ ಕೇವಲ ಒಂದೇ ನಿಮಿಷದಲ್ಲಿ ವ್ಯಕ್ತಿ ಕೊರೊನಾ ಪೀಡಿತನಾಗಿದ್ದಾನೆಯೇ ಎಂಬುದು ಗೊತ್ತಾಗುತ್ತದೆ. ಇದನ್ನು ಗೇಮ್ ಚೇಂಜರ್ ರೂಪದಲ್ಲಿ ನೋಡಲಾಗ್ತಿದೆ. ಭಾರತ ಈ ಪರೀಕ್ಷಾ ಕಿಟ್ ತಯಾರಿಸುವ ಕೇಂದ್ರವಾಗಲಿ ಎಂದು ಇಸ್ರೇಲ್ ಬಯಸುತ್ತಿದೆಯಂತೆ. ಇದ್ರ ಪರೀಕ್ಷೆಯ ಫಲಿತಾಂಶ ಉತ್ತಮವಾಗಿದೆ. ಶೀಘ್ರದಲ್ಲಿಯೇ ಇದು ಮಾರುಕಟ್ಟೆಯಲ್ಲಿ ಸಿಗುವ ಸಾಧ್ಯತೆಯಿದೆ ಎನ್ನಲಾಗ್ತಿದೆ.
ಭಾರತದಲ್ಲಿರುವ ಇಸ್ರೇಲ್ ರಾಯಬಾರಿ ರಾನ್ ಮಲ್ಕಾ ಪ್ರಕಾರ, ಇದು ವಿಶ್ವಕ್ಕೆ ಒಂದು ಒಳ್ಳೆಯ ಸುದ್ದಿ. ಇದನ್ನು ವಿಮಾನ ನಿಲ್ದಾಣದಲ್ಲಿ ಹೆಚ್ಚಾಗಿ ಬಳಸಬಹುದು. ಪ್ರಯೋಗಕ್ಕೆ ಮಾದರಿಯನ್ನು ಪ್ರಯೋಗ ಶಾಲೆಗೆ ಕಳುಹಿಸುವ ಅಗತ್ಯವಿಲ್ಲ. ತಕ್ಷಣ ಅಲ್ಲಿಯೇ ಫಲಿತಾಂಶ ಸಿಗುತ್ತದೆ ಎಂದವರು ಹೇಳಿದ್ದಾರೆ. ನಾಲ್ಕು ಸಾಧನಗಳ ಅಂತಿಮ ಪರೀಕ್ಷೆ ನಡೆಯುತ್ತಿದೆ. ಇದ್ರಲ್ಲಿ ಉಸಿರಿನ ವಿಶ್ಲೇಷಕ ಹಾಗೂ ಧ್ವನಿ ಮೂಲಕ ಕೊರೊನಾ ಸೋಂಕು ಕಂಡು ಹಿಡಿಯುವ ಸಾಧನ ವಿಶೇಷವಾಗಿದೆ.