ಕೊರೊನಾ ಲಸಿಕೆ ತಯಾರಿಸುವ ಸ್ಪರ್ಧೆಯಲ್ಲಿ ರಷ್ಯಾ ಮುಂಚೂಣಿಯಲ್ಲಿದೆ. ಸ್ಪುಟ್ನಿಕ್ ವಿ ಲಸಿಕೆಯನ್ನು ಸಾರ್ವಜನಿಕರಿಗೆ ಲಭ್ಯಗೊಳಿಸಿದ ನಂತರ, ರಷ್ಯಾ ಈಗ ಮತ್ತೊಂದು ಲಸಿಕೆ ನೀಡಲು ಸಿದ್ಧತೆ ನಡೆಸಿದೆ. ರಷ್ಯಾ ತಯಾರಿಸುತ್ತಿರುವ ಈ ಲಸಿಕೆ ಹೆಸರು ಎಪಿವಾಕ್ ಕೊರೊನಾ. ಈ ಲಸಿಕೆ ಕ್ಲಿನಿಕಲ್ ಪ್ರಯೋಗಗಳಲ್ಲಿ ಯಶಸ್ವಿಯಾಗಿದೆ. ಈ ಲಸಿಕೆಯನ್ನು ಅಕ್ಟೋಬರ್ 15 ರಂದು ಬಿಡುಗಡೆ ಮಾಡುವ ನಿರೀಕ್ಷೆಯಿದೆ.
ಈ ಲಸಿಕೆಯನ್ನು ಸೈಬೀರಿಯಾದ ವೆಕ್ಟರ್ ಸ್ಟೇಟ್ ವೈರಾಲಜಿ ಸಂಶೋಧನಾ ಕೇಂದ್ರ ತಯಾರಿಸುತ್ತಿದೆ. ಎಪಿವಾಕೊರೊನಾ ಲಸಿಕೆಯ ಆರಂಭಿಕ ಹಂತದ ಪ್ರಯೋಗಗಳಲ್ಲಿ ಯಶಸ್ವಿ ಪರಿಣಾಮ ಕಾಣಿಸಿದೆ. ಎಪಿವಾಕೊರೊನಾ ಲಸಿಕೆಯ ಮೊದಲ ಮತ್ತು ಎರಡು ಹಂತಗಳ ಕ್ಲಿನಿಕಲ್ ಪ್ರಯೋಗ ನಡೆದಿದ್ದು, ಲಸಿಕೆ ಸುರಕ್ಷಿತ ಮತ್ತು ಪರಿಣಾಮಕಾರಿ ಎಂಬುದು ತಿಳಿದು ಬಂದಿದೆ.
ಲಸಿಕೆಯನ್ನು ಮೂರು ವಾರಗಳಲ್ಲಿ ಸಚಿವಾಲಯ ಅನುಮೋದಿಸಬಹುದು ಎಂದು ರಷ್ಯಾ ಆರೋಗ್ಯ ಸಚಿವರು ಹೇಳಿದ್ದಾರೆ. ಸೈಬೀರಿಯಾದಲ್ಲಿ 5,000 ಸ್ವಯಂಸೇವಕರ ಮೇಲೆ ಕ್ಲಿನಿಕಲ್ ಪ್ರಯೋಗಗಳನ್ನು ಪ್ರಾರಂಭಿಸಲಾಗುವುದು. ಪ್ರತ್ಯೇಕ ಕ್ಲಿನಿಕಲ್ ಪ್ರಯೋಗ ಕೂಡ ನಡೆಯುವುದು. ಇದರಲ್ಲಿ 60 ವರ್ಷಕ್ಕಿಂತ ಮೇಲ್ಪಟ್ಟ 150 ಸ್ವಯಂಸೇವಕರನ್ನು ಸೇರಿಸಲಾಗುವುದು. ಇದರ ನಂತರ, ವೆಕ್ಟರ್ 18 ರಿಂದ 60 ವರ್ಷದೊಳಗಿನ 5000 ಸ್ವಯಂಸೇವಕರ ಮೇಲೆ ಪ್ರಯೋಗ ನಡೆಯಲಿದೆ.