ಪ್ರತಿಯೊಬ್ಬರಿಗೂ ಈಗ ಮೊಬೈಲ್ ಬೇಕೇ ಬೇಕು. ಅದರಲ್ಲೂ ಸ್ಮಾರ್ಟ್ ಫೋನ್ ಇಲ್ಲದೆ ಬದುಕಲು ಸಾಧ್ಯವೇ ಇಲ್ಲ ಎಂಬಂಥ ಪರಿಸ್ಥಿತಿ ನಿರ್ಮಾಣವಾಗಿದೆ. ಆದ್ರೆ ಮೊಬೈಲ್ ಫೋನ್ ಗಳ ಅತಿಯಾದ ಬಳಕೆ ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ ಅನ್ನೋ ಭಯವೂ ಇತ್ತು. ಫೋನ್ ನಿಂದ ಹೊರಸೂಸುವ ವಿಕಿರಣವು ಮೆದುಳಿನ ಮೇಲೆ ನೇರ ಪರಿಣಾಮ ಬೀರುತ್ತದೆ ಅಂತ ಹೇಳಲಾಗ್ತಿತ್ತು. ಆದ್ರೀಗ ಸಂಶೋಧಕರು ಇದಕ್ಕೆಲ್ಲ ತೆರೆ ಎಳೆದಿದ್ದಾರೆ. ಮೊಬೈಲ್ ಫೋನ್ ಬಳಕೆಯಿಂದ ಅಂತಹ ಅಪಾಯವೇನೂ ಇಲ್ಲವೆಂದು ಸ್ಪಷ್ಟಪಡಿಸಿದ್ದಾರೆ.
ಸುಮಾರು 20 ವರ್ಷಗಳಿಂದ ನಿರಂತರವಾಗಿ ಮೊಬೈಲ್ ಬಳಸುತ್ತಿರುವ 7,76,000ಕ್ಕೂ ಹೆಚ್ಚು ಮಹಿಳೆಯರನ್ನು ಸಂಶೋಧನೆಗೆ ಒಳಪಡಿಸಿದ ವಿಜ್ಞಾನಿಗಳು ಈ ತೀರ್ಮಾನಕ್ಕೆ ಬಂದಿದ್ದಾರೆ. ಮೊಬೈಲ್ ಬಳಸುವುದರಿಂದ ಮೆದುಳಿನಲ್ಲಿ ಗಡ್ಡೆ ಅಥವಾ ಟ್ಯೂಮರ್ ಕಾಣಿಸಿಕೊಳ್ಳುವ ಅಪಾಯವಿಲ್ಲವೆಂದು ಭರವಸೆ ನೀಡಿದ್ದಾರೆ. 5ಜಿ ತಂತ್ರಜ್ಞಾನ ಅಭಿವೃದ್ಧಿಪಡಿಸಿದ ಮೇಲೆ ಮೊಬೈಲ್ ಗಳಿಂದಾಗುವ ಪರಿಣಾಮಗಳ ಬಗ್ಗೆ ಇದ್ದ ಆತಂಕ ಮತ್ತಷ್ಟು ಹೆಚ್ಚಾಗಿತ್ತು.
ಈ ಬಗ್ಗೆ ಆಕ್ಸ್‌ಫರ್ಡ್ ಪಾಪ್ಯುಲೇಶನ್ ಹೆಲ್ತ್ ಮತ್ತು ಇಂಟರ್‌ನ್ಯಾಶನಲ್ ಏಜೆನ್ಸಿ ಫಾರ್ ರಿಸರ್ಚ್ ಆನ್ ಕ್ಯಾನ್ಸರ್‌ನ ವಿಜ್ಞಾನಿಗಳು ವ್ಯಾಪಕ ಸಂಶೋಧನೆ ನಡೆಸಿದ್ದಾರೆ. ಮೊಬೈಲ್ ಅನ್ನೇ ಬಳಕೆ ಮಾಡದವರಿಗೆ ಹೋಲಿಸಿದ್ರೆ ಮೊಬೈಲ್ ಫೋನ್ ಬಳಕೆದಾರರಲ್ಲಿ ಹೆಚ್ಚಿನ ಬ್ರೈನ್ ಟ್ಯೂಮರ್ ಅಪಾಯವಿಲ್ಲ ಎಂದು ವಿಜ್ಞಾನಿಗಳು ಹೇಳಿದ್ದಾರೆ. ಈ ಅಧ್ಯಯನದಲ್ಲಿ, 1935 ಮತ್ತು 1950ರ ನಡುವೆ ಜನಿಸಿದ ನಾಲ್ಕು UK ಮಹಿಳೆಯರಲ್ಲಿ ಒಬ್ಬರ ಬಗ್ಗೆ ಸಂಶೋಧನೆ ನಡೆಸಲಾಗಿದೆ.
ಈ ಅಧ್ಯಯನದಲ್ಲಿ, 2001 ಹಾಗೂ 2011ರಲ್ಲಿ ಈ ಸಮೀಕ್ಷೆ ನಡೆದಿದೆ. ವಿವಿಧ ರೀತಿಯ ಮೆದುಳಿನ ಗೆಡ್ಡೆಗಳ ಅಪಾಯ ಹಾಗೂ ಫೋನ್ ಬಳಕೆಗೆ ಸಂಬಂಧವಿದೆಯಾ ಎಂಬ ಬಗ್ಗೆ ವಿಸ್ತ್ರತವಾದ ಸಂಶೋಧನೆ ನಡೆದಿದೆ. ಈ 14 ವರ್ಷಗಳ ಸಂಶೋಧನೆಯಲ್ಲಿ ಬಳಸಿಕೊಂಡ 3,268 ಮಹಿಳೆಯರಲ್ಲಿ ಬ್ರೈನ್ ಟ್ಯೂಮರ್ ಇತ್ತು. ಆದ್ರೆ ಮೆದುಳಿನ ಗಡ್ಡೆ ಕಾಣಿಸಿಕೊಳ್ಳುವುದಕ್ಕೂ ಮೊಬೈಲ್ ಫೋನ್ ಬಳಸುವುದು ಅಥವಾ ಬಳಸದೇ ಇರುವುದಕ್ಕೂ ಯಾವುದೇ ವ್ಯತ್ಯಾಸವಿಲ್ಲ.
ಸುಮಾರು 10 ವರ್ಷಗಳಿಗಿಂತ ಹೆಚ್ಚು ಕಾಲ ಪ್ರತಿದಿನ ಮೊಬೈಲ್ ಬಳಸಿದವರಲ್ಲಿ ಬ್ರೈನ್ ಟ್ಯೂಮರ್ ಇರಲಿಲ್ಲ. ಆದಾಗ್ಯೂ, ಮೊಬೈಲ್ ಫೋನ್ ಬಳಕೆಗೆ ಸಂಬಂಧಿಸಿದ ಇತರ ಅಪಾಯಗಳು ಫೋನ್ ಬಳಸದೇ ಇರುವವರಿಗಿಂತ ಫೋನ್ ಬಳಸುತ್ತಿರುವವರಲ್ಲಿ ಹೆಚ್ಚಾಗಿದೆಯೇ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದು ಸಂಶೋಧಕರು ಒಪ್ಪಿಕೊಂಡಿದ್ದಾರೆ. ಸಂಶೋಧನೆಗೆ ಒಳಪಟ್ಟವರಲ್ಲಿ ಕೇವಲ ಶೇ.18ರಷ್ಟು ಫೋನ್ ಬಳಕೆದಾರರು ವಾರಕ್ಕೆ 30 ನಿಮಿಷ ಅಥವಾ ಅದಕ್ಕಿಂತ ಹೆಚ್ಚು ಕಾಲ ಮೊಬೈಲ್ ಫೋನ್‌ಗಳಲ್ಲಿ ಮಾತನಾಡುತ್ತಿದ್ದರು. ಆದ್ರೆ ಮಕ್ಕಳು ಮತ್ತು ಹದಿಹರೆಯದವರನ್ನು ಸಂಶೋಧನೆಗೆ ಒಳಪಡಿಸಿಲ್ಲ.