ವಿಶ್ವಾದ್ಯಂತ ಕೊರೊನಾ ಸಾಂಕ್ರಾಮಿಕ ರೋಗದಿಂದಾಗಿ ಇತರ ಕಾಯಿಲೆಗಳಿಂದ ಬಳಲುತ್ತಿರುವ ರೋಗಿಗಳಿಗೆ ಸರಿಯಾದ ಚಿಕಿತ್ಸೆ ಸಿಗ್ತಿಲ್ಲ. ಈ ರೋಗಗಳ ಚಿಕಿತ್ಸೆಗೆ ಕೊರೊನಾ ಅಡ್ಡಿಯಾಗ್ತಿದೆ ಎಂದು ವಿಶ್ವಸಂಸ್ಥೆಯ ಆರೋಗ್ಯ ತಜ್ಞರು ಹೇಳಿದ್ದಾರೆ.
ಕ್ಯಾನ್ಸರ್, ಹೃದ್ರೋಗ, ಮಧುಮೇಹ ಮುಂತಾದ ಸಾಂಕ್ರಾಮಿಕವಲ್ಲದ ಕಾಯಿಲೆಗಳ ಚಿಕಿತ್ಸೆಗೆ ಆದ್ಯತೆ ನೀಡಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ ಸರ್ಕಾರಗಳಿಗೆ ಮನವಿ ಮಾಡಿದೆ. ಈ ಕಾಯಿಲೆಗಳಿಂದ ಪ್ರತಿವರ್ಷ ನಾಲ್ಕು ಕೋಟಿಗೂ ಹೆಚ್ಚು ಜನರು ಸಾಯುತ್ತಾರೆ ಎಂದು ಡಬ್ಲ್ಯುಎಚ್‌ಒ ಹೇಳಿದೆ.
ಕೋವಿಡ್ ಇಲ್ಲದ ಸಂದರ್ಭದಲ್ಲೇ ನಾಲ್ಕು ಕೋಟಿಗೂ ಹೆಚ್ಚು ಜನರು ಇತರ ಖಾಯಿಲೆಯಿಂದ ಸಾವನ್ನಪ್ಪುತ್ತಿದ್ರೆ ಕೊರೊನಾ ಸಂದರ್ಭದಲ್ಲಿ ಬೇರೆ ರೋಗಗಳನ್ನು ನಿರ್ಲಕ್ಷ್ಯಿಸಲಾಗ್ತಿದ್ದು, ಈ ಸಂಖ್ಯೆ ಹೆಚ್ಚಾಗುವ ಸಾಧ್ಯತೆಯಿದೆ ಎಂದು ಡಬ್ಲ್ಯುಎಚ್ ಒ ಹೇಳಿದೆ.
ವಿಶ್ವ ಆರೋಗ್ಯ ಸಂಸ್ಥೆಯ ಪ್ರಕಾರ, ಕೊರೊನಾ ವೈರಸ್ ಬಿಕ್ಕಟ್ಟು ಆರೋಗ್ಯ ಸೇವೆಗಳ ಮೇಲೆ ತೀವ್ರ ಪರಿಣಾಮ ಬೀರಿದೆ. ಈ ಕಾರಣದಿಂದಾಗಿ ಶೇಕಡಾ 55 ಕ್ಕಿಂತ ಹೆಚ್ಚು ಕ್ಯಾನ್ಸರ್ ರೋಗಿಗಳು ಬಾಧಿತರಾಗಿದ್ದಾರೆ. ಕೋವಿಡ್ 19ಗೆ ಹೆಚ್ಚು ಮಹತ್ವ ನೀಡ್ತಿರುವ ಕಾರಣ ಇತರ ರೋಗಿಗಳಿಗೆ ಕಷ್ಟವಾಗ್ತಿದೆ. ಈಗಲೂ ವಿಶ್ವದ ಪ್ರತಿ 10 ಸಾವುಗಳಲ್ಲಿ ಏಳು ಸಾವುಗಳು ಈ ರೋಗಗಳಿಂದ ಉಂಟಾಗುತ್ತವೆ. ಈಗಾಗಲೇ ಈ ಕಾಯಿಲೆಗಳಿಂದ ಬಳಲುತ್ತಿರುವ ಜನರಿಗೆ ಕೊರೊನಾ ವೈರಸ್ ಹೆಚ್ಚು ಅಪಾಯಕಾರಿ ಎಂದು ಡಬ್ಲ್ಯುಎಚ್‌ಒ ಹೇಳಿದೆ.
ಹೃದ್ರೋಗ, ಕ್ಯಾನ್ಸರ್, ಮಧುಮೇಹ ಮತ್ತು ದೀರ್ಘಕಾಲದ ಉಸಿರಾಟದ ಕಾಯಿಲೆಗಳಿಗೆ ಸಂಬಂಧಿಸಿದ ರೋಗಗಳು ಸಾಂಕ್ರಾಮಿಕವಲ್ಲದ ಕಾಯಿಲೆಗಳಲ್ಲಿ ಬರುತ್ತವೆ. ಇದ್ರಲ್ಲಿ ಯುವಕರು ಸೇರಿದ್ದಾರೆ. ಇದು ಪ್ರತಿವರ್ಷ 40 ದಶಲಕ್ಷಕ್ಕೂ ಹೆಚ್ಚು ಜನರ ಸಾವಿಗೆ ಕಾರಣವಾಗ್ತಿದೆ ಎಂದು ಡಬ್ಲ್ಯುಎಚ್ ಒ ಹೇಳಿದೆ.