ಕೊರೊನಾ ವೈರಸ್ ಗೆ ವಿಶ್ವದಾದ್ಯಂತ ಲಸಿಕೆ ಕಂಡು ಹಿಡಿಯಲಾಗ್ತಿದೆ. ಅಕ್ಟೋಬರ್ ನಲ್ಲಿ ಅಮೆರಿಕಾದಲ್ಲಿ ಲಸಿಕೆ ಸಿಗಲಿದೆ ಎಂದು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹೇಳಿದ್ದರು. ಆದ್ರೆ ಅವ್ರ ಈ ಹೇಳಿಕೆ ಹೊರತಾಗಿಯೂ ಆಡಳಿತಾಧಿಕಾರಿಯೊಬ್ಬರು ಭಿನ್ನ ಹೇಳಿಕೆ ನೀಡಿದ್ದಾರೆ.
ಕೊರೊನಾ ಲಸಿಕೆ ಮುಂದಿನ ವಾರ ಬರುತ್ತೆ ಎಂಬ ನಿರೀಕ್ಷೆಯಲ್ಲಿದ್ದ ಜನರಿಗೆ ಅಧಿಕಾರಿ ನಿರಾಸೆ ಮೂಡಿಸಿದ್ದಾರೆ. ಅಮೆರಿಕಾದಲ್ಲಿ 2021ಕ್ಕೆ ಲಸಿಕೆ ಲಭ್ಯವಾಗಲಿದೆ ಎಂದಿದ್ದಾರೆ. ಜನವರಿ 2021 ರಿಂದ ವಿತರಣೆ ಶುರು ಮಾಡಲು ಸುರಕ್ಷಿತ ಮತ್ತು ಪರಿಣಾಮಕಾರಿ ಲಸಿಕೆಗಳ ಉತ್ಪಾದನೆಯನ್ನು ವೇಗಗೊಳಿಸಲಾಗುತ್ತಿದೆ ಎಂದು ರಾಬರ್ಟ್ ಕಾಡ್ಲೆಕ್ ಶುಕ್ರವಾರ ಇಮೇಲ್ ನಲ್ಲಿ ತಿಳಿಸಿದ್ದಾರೆ. ವರ್ಷಾಂತ್ಯದ ಮೊದಲು ಲಸಿಕೆಗೆ ಅನುಮೋದನೆ ಸಿಗಬಹುದು. ಆದರೆ ವಿತರಣೆಗೆ ಸಮಯ ತೆಗೆದುಕೊಳ್ಳುತ್ತದೆ ಎಂದವರು ಹೇಳಿದ್ದಾರೆ.
ಶ್ವೇತಭವನದಲ್ಲಿ ಮಾತನಾಡಿದ್ದ ಟ್ರಂಪ್, ಅಕ್ಟೋಬರ್ ವೇಳೆಗೆ ಲಸಿಕೆ ಸಿಗಬಹುದೆಂಬ ನಿರೀಕ್ಷೆಯಿದೆ ಎಂದಿದ್ದರು. ಆದ್ರೆ ಕಾಡ್ಲೆಕ್ ಮಾತ್ರವಲ್ಲ ಆರೋಗ್ಯ ಮತ್ತು ಮಾನವ ಸೇವೆಗಳ ಕಾರ್ಯದರ್ಶಿ ಅಲೆಕ್ಸ್ ಕೂಡ ಈ ವರ್ಷದ ಅಂತ್ಯಕ್ಕೆ 100 ಮಿಲಿಯನ್ ಲಸಿಕೆ ಮಾತ್ರ ಲಭ್ಯವಾಗುತ್ತದೆ ಎಂದಿದ್ದಾರೆ.