ಕೊರೊನಾ ಮಹಾಮಾರಿಯಿಂದಾಗಿ ಈಗಾಗಲೇ ಲಕ್ಷಾಂತರ ಮಂದಿ ಸಾವಿಗೀಡಾಗಿದ್ದಾರೆ. ಜೊತೆಗೆ ಕೋಟ್ಯಾಂತರ ಜನರ ಜೀವನ ಬೀದಿಗೆ ಬಿದ್ದಿದೆ. ಅದೆಷ್ಟೋ ಉದ್ಯಮಗಳು ನೆಲಕಚ್ಚಿ ಹೋಗಿವೆ. ಇದರ ಮಧ್ಯೆ ಅನೇಕರು ಕೆಲಸ ಕಳೆದುಕೊಂಡು ನಿರುದ್ಯೋಗಿಗಳಾಗಿದ್ದಾರೆ. ಇಷ್ಟೆಲ್ಲದರ ನಡುವೆ ಇದೀಗ ವಿಶ್ವ ಬ್ಯಾಂಕ್ ಶಾಕಿಂಗ್ ಸತ್ಯವೊಂದನ್ನು ಹೇಳಿದೆ.
ಹೌದು, ವಿಶ್ವ ಬ್ಯಾಂಕ್ ಅಂದಾಜಿನ ಪ್ರಕಾರ ಕೊರೊನಾ 10 ಕೋಟಿಗಿಂತ ಅಧಿಕ ಜನರನ್ನು ಬಡತನಕ್ಕೆ ದೂಡಲ್ಪಡುತ್ತಿದೆಯಂತೆ. ಈ ಬಗ್ಗೆ ಮಾಹಿತಿ ನೀಡಿರುವ ವಿಶ್ವ ಬ್ಯಾಂಕ್ ಅಧ್ಯಕ್ಷ ಡೇವಿಡ್ ಮಾಲಪಾಸ್, ಕೊರೊನಾದಿಂದಾಗಿ ಕೊಟ್ಯಾಂತರ ಜನ ಕೆಲಸ ಕಳೆದುಕೊಂಡಿದ್ದಾರೆ. ಜೀವನಕ್ಕೂ ಯಾವುದೇ ಆಧಾರ ಇಲ್ಲದಂತಾಗಿದೆ ಎಂದಿದ್ದಾರೆ.
ಇನ್ನು ಶ್ರೀಮಂತ ದೇಶಗಳು ಬಡ ದೇಶಗಳ ಬೆನ್ನಿಗೆ ನಿಲ್ಲಬೇಕಿದೆ. ಹಾಗಾದಲ್ಲಿ ತೀರಾ ಬಡತನ ಅನುಭವಿಸುವ ದೇಶಗಳು ಕೊಂಚ ಉಸಿರಾಡುತ್ತವೆ. ಹಾಗೂ ಕೊರೊನಾ ಆರ್ಭಟ ಮುಂದುವರೆದರೆ ಮುಂದಿನ ದಿನಗಳಲ್ಲಿ ಈ ಬಡತನಕ್ಕೆ ಸಿಲುಕಿದ ಜನರ ಸಂಖ್ಯೆಯಲ್ಲಿ ಏರಿಕೆಯಾಗುವ ಸಾಧ್ಯತೆ ಇದೆ ಎಂದಿದ್ದಾರೆ.