ಭಾರತದಲ್ಲಿ ಕೊರೊನಾ ಮೂರನೇ ಅಲೆ ಆರಂಭವಾಗಿದೆ. ಇದರ ಜೊತೆಗೆ ಒಮಿಕ್ರಾನ್ ಭೀತಿಯೂ ಕಾಡುತ್ತಿದ್ದು, ಈ ಹಿನ್ನಲೆಯಲ್ಲಿ ಇದರ ನಿಯಂತ್ರಣಕ್ಕಾಗಿ ಕೆಲ ರಾಜ್ಯಗಳು ವೀಕೆಂಡ್ ಕರ್ಫ್ಯೂ, ನೈಟ್ ಕರ್ಫ್ಯೂ ಸೇರಿದಂತೆ ಹಲವು ಕಠಿಣ ಕ್ರಮಗಳನ್ನು ಕೈಗೊಂಡಿವೆ. ಇದರ ಜೊತೆಗೆ ಕೇಂದ್ರ ಸರ್ಕಾರವೂ ಬಿಗಿ ನಿಯಮಗಳನ್ನು ಅನುಸರಿಸುತ್ತಿದ್ದು, ಅದರಲ್ಲೂ ಅಂತರಾಷ್ಟ್ರೀಯ ಪ್ರಯಾಣಿಕರ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.
ಇದೀಗ ಮತ್ತೊಂದು ಆದೇಶವನ್ನು ಹೊರಡಿಸಲಾಗಿದ್ದು, ಅಂತರಾಷ್ಟ್ರೀಯ ಪ್ರಯಾಣಿಕರು ಭಾರತಕ್ಕೆ ಬಂದಿಳಿದ ಬಳಿಕ ಕಡ್ಡಾಯವಾಗಿ ಏಳು ದಿನಗಳ ಕಾಲ ಕ್ವಾರಂಟೈನ್ ಆಗಬೇಕಿದೆ. ಅಲ್ಲದೇ ಎಂಟನೇ ದಿನ RT-PCR ಪರೀಕ್ಷೆ ಮಾಡಿಸಿಕೊಂಡು ಇದರ ವರದಿಯನ್ನು Air Suvidha ಪೋರ್ಟಲ್ ನಲ್ಲಿ ಅಪ್ ಲೋಡ್ ಮಾಡಬೇಕಿದೆ. ಈ ಕುರಿತು ನಾಗರಿಕ ವಿಮಾನಯಾನ ಸಚಿವಾಲಯ ಟ್ವೀಟ್ ಮೂಲಕ ಮಾಹಿತಿ ನೀಡಿದೆ.
ಈ ಹಿಂದೆ ಕೋವಿಡ್ ಹೆಚ್ಚಿರುವ ರಾಷ್ಟ್ರಗಳಿಂದ ಬಂದ ಪ್ರಯಾಣಿಕರಿಗೆ ಮಾತ್ರ ಕ್ವಾರಂಟೈನ್ ಸೇರಿದಂತೆ ಹಲವು ನಿಯಮಗಳಿದ್ದು, ಈಗ ಇದನ್ನು ಎಲ್ಲ ಅಂತರಾಷ್ಟ್ರೀಯ ಪ್ರಯಾಣಿಕರಿಗೂ ವಿಸ್ತರಿಸಲಾಗಿದೆ. ಅಲ್ಲದೇ ಎಂಟನೇ ದಿನ ಈ ಪ್ರಯಾಣಿಕರ ಕೋವಿಡ್ ವರದಿ ನೆಗೆಟಿವ್ ಬಂದರೂ ಸಹ ಮತ್ತೆ ಏಳು ದಿನಗಳ ಕಾಲ ಅವರುಗಳ ಮೇಲೆ ತೀವ್ರ ನಿಗಾ ಇಡುವಂತೆ ಸಂಬಂಧಪಟ್ಟವರಿಗೆ ಸೂಚಿಸಲಾಗಿದೆ.