
ತೂಕ ನಷ್ಟಕ್ಕೆ ವಿಶ್ವಾದ್ಯಂತ ಪ್ರಸಿದ್ಧವಾದ ಡಯಟ್ ಪ್ಲಾನಿಂಗ್ ಕುರಿತಂತೆ ವಿಜ್ಞಾನಿಗಳು ಆಘಾತಕಾರಿ ಮಾಹಿತಿಯನ್ನು ಬಹಿರಂಗಪಡಿಸಿದ್ದಾರೆ. ಹೊಸ ಅಧ್ಯಯನದ ಪ್ರಕಾರ ಇಂಟರ್‌ಮಿಟ್ಟೆಂಟ್ ಫಾಸ್ಟಿಂಗ್ (ಮಧ್ಯಂತರ ಉಪವಾಸ) ಮೂಲಕ ತೂಕ ಕಳೆದುಕೊಳ್ಳುವುದು ಆರೋಗ್ಯಕ್ಕೆ ಅಪಾಯಕಾರಿ. ಚಿಕಾಗೋದಲ್ಲಿ ನಡೆದ ವೈದ್ಯಕೀಯ ಸಭೆಯಲ್ಲಿ ಈ ಕುರಿತ ಸಂಶೋಧನೆಯನ್ನು ಮಂಡಿಸಲಾಗಿದೆ. ಎಂಟು ಗಂಟೆಗಿಂತಲೂ ಹೆಚ್ಚಿನ ಸಮಯ ಉಪವಾಸವಿರುವುದು ಹೃದ್ರೋಗದಿಂದ ಸಾವಿನ ಅಪಾಯವನ್ನು 91 ಪ್ರತಿಶತದಷ್ಟು ಹೆಚ್ಚಿಸುತ್ತದೆ ಎಂದು ಅಧ್ಯಯನವು ಕಂಡುಹಿಡಿದಿದೆ.
ಅಮೇರಿಕನ್ ಹಾರ್ಟ್ ಅಸೋಸಿಯೇಷನ್ ಬಿಡುಗಡೆ ಮಾಡಿದ ಈ ಅಧ್ಯಯನದ ವಿವರಗಳನ್ನು ಇನ್ನೂ ಬಹಿರಂಗಪಡಿಸಲಾಗಿಲ್ಲ. ಹೊಸ ತಲೆಮಾರಿನ ಔಷಧಿಗಳು ತ್ವರಿತ ತೂಕ ನಷ್ಟಕ್ಕೆ ಸಹಾಯ ಮಾಡುತ್ತಿವೆಯಾದರೂ, ಜೀವನಶೈಲಿಯನ್ನು ಬದಲಾಯಿಸುವ ಮೂಲಕ ತೂಕವನ್ನು ಕಳೆದುಕೊಳ್ಳುವ ವಿಧಾನಗಳ ಬಗ್ಗೆಯೂ ಪ್ರಶ್ನೆಗಳನ್ನು ಎತ್ತಲಾಗುತ್ತಿದೆ. ಕೆಲವು ವೈದ್ಯರು ಈ ಅಧ್ಯಯನದ ಫಲಿತಾಂಶಗಳನ್ನು ಪ್ರಶ್ನಿಸಿದ್ದಾರೆ. ಇಂಟರ್‌ಮಿಟ್ಟೆಂಟ್ ಫಾಸ್ಟಿಂಗ್ ಮಾಡುವ ಜನರು ಮತ್ತು ಇತರರ ಹೃದಯದ ಆರೋಗ್ಯವನ್ನು ಸಂಶೋಧನೆಯ ಸಮಯದಲ್ಲಿ ಪರೀಕ್ಷೆಗೆ ಒಳಪಡಿಸಲಾಗಿದೆ.
ಶಾಂಘೈ ಜಿಯಾವೊ ಟಾಂಗ್ ಯೂನಿವರ್ಸಿಟಿ ಸ್ಕೂಲ್ ಆಫ್ ಮೆಡಿಸಿನ್‌ನ ವಿಕ್ಟರ್ ಝೌ ನೇತೃತ್ವದ ಸಂಶೋಧಕರು ಯುಎಸ್ ಸೆಂಟರ್ಸ್ ಫಾರ್ ಡಿಸೀಸ್ ಕಂಟ್ರೋಲ್ ಮತ್ತು ಪ್ರಿವೆನ್ಷನ್‌ನ ರಾಷ್ಟ್ರೀಯ ಆರೋಗ್ಯ ಮತ್ತು ಪೋಷಣೆ ಪರೀಕ್ಷೆ ಸಮೀಕ್ಷೆಯಲ್ಲಿ ಒಳಗೊಂಡಿರುವ ಸುಮಾರು 20,000 ಜನರ ಡೇಟಾವನ್ನು ವಿಶ್ಲೇಷಿಸಿದ್ದಾರೆ. ಅಧ್ಯಯನವು 2003 ರಿಂದ 2019 ರವರೆಗಿನ ಸಾವಿನ ಡೇಟಾವನ್ನು ಒಳಗೊಂಡಿದೆ. ಅಧ್ಯಯನದಲ್ಲಿ ಸೇರಿಸಲಾದ ಸುಮಾರು ಅರ್ಧದಷ್ಟು ರೋಗಿಗಳು ಪುರುಷರು ಮತ್ತು ಅವರ ಸರಾಸರಿ ವಯಸ್ಸು 48 ವರ್ಷಗಳು.
ಇಂಟರ್‌ಮಿಟ್ಟೆಂಟ್ ಫಾಸ್ಟಿಂಗ್ ಮಾಡುವವರಲ್ಲಿ ಹೆಚ್ಚಿನ ಬಾಡಿ ಮಾಸ್ ಇಂಡೆಕ್ಸ್ (BMI) ಮತ್ತು ಆಹಾರದ ಅಭದ್ರತೆ ಸಾಮಾನ್ಯವಾಗಿದೆ. ಅಧಿಕ ರಕ್ತದೊತ್ತಡ, ಮಧುಮೇಹ, ಹೃದಯ ಸಂಬಂಧಿ ಕಾಯಿಲೆಗಳೂ ಇವರಲ್ಲಿ ಹೆಚ್ಚಾಗಿರುವುದು ಕಂಡುಬಂದಿದೆ. ಆದರೆ 8 ಗಂಟೆಗಳಿಗೂ ಹೆಚ್ಚು ಕಾಲ ಆಹಾರ ಸೇವಿಸದೇ ಇರುವವರಲ್ಲಿ ಹೃದಯ ಸಂಬಂಧಿತ ಮರಣದ ಸಾಧ್ಯತೆಗಳು ಹೆಚ್ಚಾಗಿವೆ.
ಈ ಮಧ್ಯಂತರ ಉಪವಾಸವು ಕ್ಯಾಲೊರಿಗಳನ್ನು ಕಡಿಮೆ ಮಾಡಲು ಜನಪ್ರಿಯ ವಿಧಾನವಾಗಿದೆ. ಹಾಗಾಗಿ ಇದರ ದೀರ್ಘಾವಧಿಯ ಪರಿಣಾಮಗಳ ಕುರಿತು ತಿಳಿಯಲು ಇನ್ನಷ್ಟು ಅಧ್ಯಯನದ ಅಗತ್ಯವಿದೆ ಎಂದು ವಿಜ್ಞಾನಿಗಳು ಅಭಿಪ್ರಾಯಪಟ್ಟಿದ್ದಾರೆ.