
ನವದೆಹಲಿ: ಕಿಸಾನ್ ವಿಕಾಸ ಪತ್ರ, ನಿಶ್ಚಿತ ಅವಧಿ ಠೇವಣಿ, ಮಾಸಿಕ ಆದಾಯ ಯೋಜನೆ ಸೇರಿದಂತೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ದರ ಬದಲಾಗದೆ ಉಳಿದಿದೆ.
2024- 25 ನೇ ಸಾಲಿನ ಏಪ್ರಿಲ್ 1ರಂದು ಆರಂಭವಾಗುವ ಏಪ್ರಿಲ್ -ಜೂನ್ ತ್ರೈಮಾಸಿಕದಲ್ಲಿ ಬಡ್ಡಿ ದರ ಬದಲಾಗದೆ ಈಗಿನಂತೆ ಮುಂದುವರೆಯಲಿದೆ ಎಂದು ಕೇಂದ್ರ ಸರ್ಕಾರ ಗುರುವಾರ ತಿಳಿಸಿದೆ. ಹಣಕಾಸು ಸಚಿವಾಲಯದ ಅಧಿಸೂಚನೆಯ ಪ್ರಕಾರ, 2023 -24ನೇ ಆರ್ಥಿಕ ವರ್ಷದ ಕೊನೆಯ ತ್ರೈಮಾಸಿಕಕ್ಕೆ ಪ್ರಕಟಿಸಲಾದ ಬಡ್ಡಿ ದರವೇ ಮುಂದುವರೆಯಲಿದೆ. ಇದರಿಂದ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳಲ್ಲಿ ಹೆಚ್ಚಳವನ್ನು ನಿರೀಕ್ಷಿಸುತ್ತಿರುವವರಿಗೆ ಬೇಸರ ತಂದಿದೆ.
ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC), ಹಿರಿಯ ನಾಗರಿಕರ ಉಳಿತಾಯ ಯೋಜನೆ(SCSS) ಮತ್ತು ಸಾರ್ವಜನಿಕ ಭವಿಷ್ಯ ನಿಧಿ(PPF) ನಂತಹ ಪ್ರಮುಖ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳು ಕ್ರಮವಾಗಿ 7.7%, 8.2% ಮತ್ತು 7.1% ನಲ್ಲಿ ಬದಲಾಗದೆ ಉಳಿದಿವೆ.
3 ವರ್ಷಗಳ ಸಮಯದ ಠೇವಣಿ ಮತ್ತು ಸುಕನ್ಯಾ ಸಮೃದ್ಧಿ ಖಾತೆ ಯೋಜನೆಯ ಬಡ್ಡಿ ದರ ಕ್ರಮವಾಗಿ 7.1% ಮತ್ತು 8.2% ರಷ್ಟು ಇದೆ.