ನವದೆಹಲಿ: PPF, NSC ಯಂತಹ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳಲ್ಲಿ ಯಥಾಸ್ಥಿತಿ ಕಾಯ್ದುಕೊಳ್ಳಲಾಗಿದೆ.
ಜನವರಿ-ಮಾರ್ಚ್ ತ್ರೈಮಾಸಿಕದಲ್ಲಿ ಪಿಪಿಎಫ್, ಎನ್‌ಎಸ್‌ಸಿಯಂತಹ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಲು ಸರ್ಕಾರ ನಿರ್ಧರಿಸಿದೆ. ಅಧಿಸೂಚನೆ ಹೊರಡಿಸಿ ಈ ಮಾಹಿತಿ ನೀಡಲಾಗಿದೆ.
ಹಣಕಾಸು ಸಚಿವಾಲಯವು ಮಂಗಳವಾರ ಹೊರಡಿಸಿದ ಅಧಿಸೂಚನೆಯಲ್ಲಿ, “2024-25 ನೇ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕಕ್ಕೆ ವಿವಿಧ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳು ಜನವರಿ 1, 2025 ರಿಂದ ಪ್ರಾರಂಭವಾಗಿ ಮಾರ್ಚ್ 31, 2025 ಕ್ಕೆ ಕೊನೆಗೊಳ್ಳುತ್ತವೆ.
FY 2024-25 ರ ಮೂರನೇ ತ್ರೈಮಾಸಿಕ (ಅಕ್ಟೋಬರ್ 1, 2024 ರಿಂದ ಡಿಸೆಂಬರ್ 31, 2024)ದಲ್ಲಿ ಸೂಚಿಸಲಾದ ದರಗಳಿಂದ ಬದಲಾವಣೆ ಮಾಡಿಲ್ಲ. ಅಧಿಸೂಚನೆಯ ಪ್ರಕಾರ, ಸುಕನ್ಯಾ ಸಮೃದ್ಧಿ ಯೋಜನೆಯಡಿ ಠೇವಣಿಗಳ ಮೇಲಿನ ಬಡ್ಡಿ ದರವು ಶೇಕಡ 8.2 ಆಗಿರುತ್ತದೆ, ಆದರೆ ಮೂರು ವರ್ಷಗಳ ಸ್ಥಿರ ಠೇವಣಿಗಳ ಮೇಲಿನ ಬಡ್ಡಿ ದರವು ಕೇವಲ 7.1 ಶೇಕಡ ಮಾತ್ರ ಇದೆ.
ಜನಪ್ರಿಯ ಪಬ್ಲಿಕ್ ಪ್ರಾವಿಡೆಂಟ್ ಫಂಡ್(ಪಿಪಿಎಫ್) ಮತ್ತು ಪೋಸ್ಟ್ ಆಫೀಸ್ ಉಳಿತಾಯ ಠೇವಣಿ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಕ್ರಮವಾಗಿ 7.1 ಮತ್ತು 4 ಪ್ರತಿಶತದಲ್ಲಿ ಉಳಿಸಿಕೊಳ್ಳಲಾಗಿದೆ.
ಕಿಸಾನ್ ವಿಕಾಸ್ ಪತ್ರದ ಮೇಲಿನ ಬಡ್ಡಿ ದರವು ಶೇಕಡ 7.5 ಆಗಿರುತ್ತದೆ ಮತ್ತು ಹೂಡಿಕೆಯು 115 ತಿಂಗಳುಗಳಲ್ಲಿ ಪಕ್ವವಾಗುತ್ತದೆ. ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ(NSC) ಮೇಲಿನ ಬಡ್ಡಿ ದರವು ಜನವರಿ-ಮಾರ್ಚ್ 2025 ರ ಅವಧಿಗೆ ಶೇ. 7.7 ಇರುತ್ತದೆ. ಪ್ರಸಕ್ತ ತ್ರೈಮಾಸಿಕದಂತೆ, ಮಾಸಿಕ ಆದಾಯ ಯೋಜನೆಯು ಹೂಡಿಕೆದಾರರಿಗೆ ಶೇ.7.4 ಬಡ್ಡಿಯನ್ನು ನೀಡುತ್ತದೆ.
ಕಳೆದ ನಾಲ್ಕು ತ್ರೈಮಾಸಿಕಗಳಲ್ಲಿ ಬಡ್ಡಿದರದಲ್ಲಿ ಯಾವುದೇ ಬದಲಾವಣೆಯಾಗಿಲ್ಲ. ಕಳೆದ ಹಣಕಾಸು ವರ್ಷದ ನಾಲ್ಕನೇ ತ್ರೈಮಾಸಿಕದಲ್ಲಿ ಸರ್ಕಾರವು ಕೆಲವು ಯೋಜನೆಗಳಲ್ಲಿ ಬದಲಾವಣೆಗಳನ್ನು ಮಾಡಿದೆ. ಪ್ರತಿ ತ್ರೈಮಾಸಿಕದಲ್ಲಿ ಅಂಚೆ ಕಚೇರಿಗಳು ಮತ್ತು ಬ್ಯಾಂಕ್‌ಗಳು ನಿರ್ವಹಿಸುವ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳ ಅಧಿಸೂಚನೆಯನ್ನು ಸರ್ಕಾರ ಹೊರಡಿಸುತ್ತದೆ.