ನವದೆಹಲಿ: ರೆಪೊ ದರವನ್ನು 35 ಬೇಸಿಸ್ ಪಾಯಿಂಟ್‌ಗಳಿಂದ ಹೆಚ್ಚಿಸಿರುವ ಆರ್.ಬಿ.ಐ ಕ್ರಮದ ಒಂದು ವಾರದ ನಂತರ, ಸಾರ್ವಜನಿಕ ಭವಿಷ್ಯ ನಿಧಿ (ಪಿಪಿಎಫ್), ಸುಕನ್ಯಾ ಸಮೃದ್ಧಿ ಸ್ಕೀಮ್, ಹಿರಿಯ ನಾಗರಿಕರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿದರಗಳನ್ನು ಸರ್ಕಾರ ಹೆಚ್ಚಿಸುವ ಸಾಧ್ಯತೆ ಇದೆ.
ಹಣಕಾಸು ಸಚಿವಾಲಯವು ಜನವರಿ-ಮಾರ್ಚ್ ತ್ರೈಮಾಸಿಕದ ಬಡ್ಡಿದರಗಳಿಗೆ ಅನ್ವಯ ಆಗಿ, ಅದು ಸಣ್ಣ ಉಳಿತಾಯ ಯೋಜನೆಗಳ ದರಗಳನ್ನು ಹೆಚ್ಚಿಸಬಹುದು ಎಂದು ಅಂದಾಜಿಸಲಾಗಿದೆ.
ಈ ವರ್ಷ ಸೆಪ್ಟೆಂಬರ್ 30 ರಂದು, ಹಿರಿಯ ನಾಗರಿಕರ ಉಳಿತಾಯ ಯೋಜನೆ, ಕಿಸಾನ್ ವಿಕಾಸ್ ಪತ್ರ (ಕೆವಿಪಿ), ಮಾಸಿಕ ಆದಾಯ ಖಾತೆ ಯೋಜನೆ ಮತ್ತು ಸಮಯ ಠೇವಣಿಗಳ ಮೇಲಿನ ಬಡ್ಡಿದರಗಳನ್ನು ಸರ್ಕಾರ ಹೆಚ್ಚಿಸಿತ್ತು.
ಆದಾಗ್ಯೂ, ಸಾರ್ವಜನಿಕ ಭವಿಷ್ಯ ನಿಧಿ (PPF), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ (NSC), ಸುಕನ್ಯಾ ಸಮೃದ್ಧಿ ಯೋಜನೆಗಳಂತಹ ಇತರ ಸಣ್ಣ ಉಳಿತಾಯ ಯೋಜನೆಗಳ ಮೇಲಿನ ಬಡ್ಡಿ ದರಗಳನ್ನು ಯಥಾಸ್ಥಿತಿಯಲ್ಲಿ ಇರಿಸಲಾಗಿದೆ.
ಈ ಹಿನ್ನೆಲೆಯಲ್ಲಿ ಬಡ್ಡಿದರದಲ್ಲಿ ಹೆಚ್ಚಳ ಆಗುವ ನಿರೀಕ್ಷೆ ಇದೆ. ಅವುಗಳೆಂದರೆ, ಉಳಿತಾಯ ಠೇವಣಿ ಯೋಜನೆ, 1 ವರ್ಷದ ಸ್ಥಿರ ಠೇವಣಿ ಯೋಜನೆ, 5 ವರ್ಷಗಳ ಸ್ಥಿರ ಠೇವಣಿ ಯೋಜನೆ, 5 ವರ್ಷಗಳ ಮರುಕಳಿಸುವ ಠೇವಣಿ ಯೋಜನೆ, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರ ಯೋಜನೆ, ಸಾರ್ವಜನಿಕ ಭವಿಷ್ಯ ನಿಧಿ ಯೋಜನೆ, ಸುಕನ್ಯಾ ಸಮೃದ್ಧಿ ಖಾತೆ ಯೋಜನೆ.