ನವದೆಹಲಿ: ಸಣ್ಣ ಉಳಿತಾಯ ಯೋಜನೆ ಬಡ್ಡಿ ದರ ಇಳಿಕೆಯಾಗಲಿದೆ ಎಂದು ಹೇಳಲಾಗಿತ್ತಾದರೂ, ಸರ್ಕಾರ ಬಡ್ಡಿದರಗಳನ್ನು ಬದಲಾವಣೆ ಮಾಡದೆ ಉಳಿಸಿದೆ.
ಸದ್ಯದ ಕೊರೋನಾ ಆರ್ಥಿಕ ಪರಿಸ್ಥಿತಿಯಲ್ಲಿ ಬಡ್ಡಿದರ ಇಳಿಕೆ ಮಾಡುವುದು ಸೂಕ್ತವೆಂದು ತಜ್ಞರು ಸಲಹೆ ನೀಡಿದ್ದರು. ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರ ಕಡಿತ ಮಾಡುವುದರಿಂದ ಸರ್ಕಾರದ ಸಾಲದ ವೆಚ್ಚ ಕಡಿಮೆಯಾಗಲಿದೆ ಎಂದು ಹೇಳಲಾಗಿತ್ತು. ಆದರೆ, ಬದಲಾದ ಪರಿಸ್ಥಿತಿಯಲ್ಲಿ ಬಡ್ಡಿದರಗಳನ್ನು ಹಾಗೆಯೇ ಮುಂದುವರೆಸಲಾಗಿದೆ.
ಪಿಪಿಎಫ್, ಎನ್ಎಸ್ ಸಿ ಮತ್ತು ಇತರೆ ಅಂಚೆ ಕಚೇರಿ ಯೋಜನೆಗಳ ಬಡ್ಡಿದರಗಳು ಬದಲಾಗದೆ ಉಳಿದಿವೆ. 2021 ರ ಸೆಪ್ಟೆಂಬರ್ 30 ಕ್ಕೆ ಕೊನೆಯಾಗುವ ತ್ರೈಮಾಸಿಕದಲ್ಲಿ ಸಣ್ಣ ಉಳಿತಾಯ ಯೋಜನೆಗಳ ಬಡ್ಡಿದರಗಳನ್ನು ಬದಲಾಗದೆ ಇರಿಸಲು ಸರ್ಕಾರ ನಿರ್ಧರಿಸಿದ್ದರಿಂದ ಸ್ಥಿರ ಆದಾಯ ಹೂಡಿಕೆದಾರರಿಗೆ ಒಳ್ಳೆಯ ಸುದ್ದಿ ಸಿಕ್ಕಂತಾಗಿದೆ.
ಸಣ್ಣ ಉಳಿತಾಯ ದರಗಳಲ್ಲಿ ಕೊನೆಯ ಪರಿಷ್ಕರಣೆ 2020 ರ ಏಪ್ರಿಲ್-ಜೂನ್ ಆಗಿದ್ದು, ಸತತ ಐದನೇ ತ್ರೈಮಾಸಿಕದಲ್ಲಿ ಸರ್ಕಾರವು ವಿವಿಧ ಅಂಚೆ ಕಚೇರಿ ಯೋಜನೆಗಳ ಬಡ್ಡಿದರಗಳನ್ನು ಉಳಿಸಿದೆ. ಸಾರ್ವಜನಿಕ ಭವಿಷ್ಯ ನಿಧಿ(ಪಿಪಿಎಫ್), ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು(ಎನ್‌ಎಸ್‌ಸಿ), ಸುಕನ್ಯಾ ಸಮೃದ್ಧಿ ಯೋಜನೆ(ಎಸ್‌ಎಸ್‌ವೈ) ಮತ್ತು ಇತರವು ಸಣ್ಣ ಉಳಿತಾಯ ಯೋಜನೆ ಬದಲಾಗಿಲ್ಲ. ಹೂಡಿಕೆದಾರರು ಅದೇ ಬಡ್ಡಿದರವನ್ನು ಪಡೆಯಲಿದ್ದಾರೆ.
ಸಣ್ಣ ಉಳಿತಾಯ ಯೋಜನೆ ಖಾತೆದಾರರು 2021 ರ ಜೂನ್ 30 ಕ್ಕೆ ಕೊನೆಗೊಂಡ ತ್ರೈಮಾಸಿಕದಲ್ಲಿ ಪಡೆಯುತ್ತಿದ್ದ ಬಡ್ಡಿದರ ಗಳಿಸಲಿದ್ದಾರೆ. ಈ ಯೋಜನೆಗಳಲ್ಲಿ ಹೊಸ ಹೂಡಿಕೆಗಳು ಹಿಂದಿನ ತ್ರೈಮಾಸಿಕದಂತೆಯೇ ಅದೇ ಬಡ್ಡಿದರಗಳನ್ನು ಹೊಂದಿರುತ್ತವೆ.
ಹಣಕಾಸು ಸಚಿವಾಲಯವು ಜೂನ್ 30, 2021 ರ ಸುತ್ತೋಲೆಯ ಮೂಲಕ ಘೋಷಿಸಿದಂತೆ, ಪಿಪಿಎಫ್ ಗೆ ಶೇಕಡ 7.10 ರಷ್ಟು, ಎನ್‌ಎಸ್‌ಸಿಗೆ ಶೇಕಡ 6.8 ರಷ್ಟು, ಪೋಸ್ಟ್ ಆಫೀಸ್ ಮಾಸಿಕ ಆದಾಯ ಯೋಜನೆ ಖಾತೆಯು ಶೇಕಡ 6.6 ರಷ್ಟು ಬಡ್ಡಿದರ ಮುಂದುವರೆಯಲಿದೆ.
ಹಿರಿಯ ನಾಗರಿಕರ ಯೋಜನೆಯು ವಾರ್ಷಿಕ ಶೇಕಡ 7.4% ಬಡ್ಡಿದರ ಇದೆ. ಕಿಸಾನ್ ವಿಕಾಸ್ ಪತ್ರಕ್ಕೆ ಶೇಕಡ 6.9 ರಷ್ಟು, ಮತ್ತು 5 ವರ್ಷದ ಸಮಯ ಠೇವಣಿಗೆ ಶೇಕಡ 6.7 ರಷ್ಟು ಬಡ್ಡಿ ದರ ಇದೆ ಎಂದು ಹೇಳಲಾಗಿದೆ.