ಬೆಂಗಳೂರು: ಅಧಿಕ ಬಡ್ಡಿ ವಸೂಲಿ ಮಾಡುವವರ ಮೇಲೆ ದಾಳಿ ನಡೆಸುವ ಅಧಿಕಾರ ಪೊಲೀಸರಿಗೆ ಇಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ಸರ್ಕಾರದಿಂದ ಪರವಾನಿಗೆ ಪಡೆಯದೆ ಸಾಲ ಪಡೆದವರಿಂದ ಅಧಿಕ ಬಡ್ಡಿ ವಸೂಲಿ ಮಾಡುವವರ ಮೇಲೆ ದಾಳಿ ನಡೆಸಿ ದಾಖಲೆ ವಶಪಡಿಸಿಕೊಳ್ಳುವ ಅಧಿಕಾರ ಪೊಲೀಸರಿಗೆ ಇಲ್ಲವೆಂದು ಹೇಳಲಾಗಿದೆ.
ಗೋಕಾಕ್ ಠಾಣೆ ಪೊಲೀಸರು ಅಧಿಕ ಬಡ್ಡಿ ವಸೂಲಿ ಆರೋಪದ ಮೇಲೆ ತಮ್ಮ ವಿರುದ್ಧ ದಾಖಲಿಸಿದ ಆರೋಪ ಪಟ್ಟಿ ಮತ್ತು ವಿಚಾರಣೆ ಪ್ರಕ್ರಿಯೆ ರದ್ದು ಮಾಡುವಂತೆ ಗೋಕಾಕ್ ನ ಬಸವರಾಜ್ ಮತ್ತು ಜಾಕಿರ್ ಹುಸೇನ್ ಅವರು ಸಲ್ಲಿಸಿದ ಅರ್ಜಿಯನ್ನು ಹೈಕೋರ್ಟ್ ನ್ಯಾಯಮೂರ್ತಿ ಹೇಮಂತ್ ಚಂದನಗೌಡ ಅವರಿದ್ದ ಧಾರವಾಡದ ಏಕ ಸದಸ್ಯ ಪೀಠ ಪುರಸ್ಕರಿಸಿ ಈ ಆದೇಶ ನೀಡಿದೆ.
ಕರ್ನಾಟಕ ಮಿತಿಮೀರಿದ ಬಡ್ಡಿ ವಿಧಿಸುವಿಕೆಯ ನಿಷೇಧ ಕಾಯ್ದೆ -2004ರ ಸೆಕ್ಷನ್ 3 ಮತ್ತು 4ರ ಅಡಿ ಅಧಿಕ ಬಡ್ಡಿ ವಸೂಲಿ ಪ್ರಕರಣ ಸಂಬಂಧ ಎಫ್ಐಆರ್ ದಾಖಲಿಸುವ ಮೊದಲು ತನಿಖೆ ನಡೆಸುವುದು ಕಾನೂನು ಬಾಹಿರವಾಗಿದೆ. ಕರ್ನಾಟಕ ಹಣ ಲೇವಾದೇವಿದಾರರ ಕಾಯ್ದೆಯ ಸೆಕ್ಷನ್ 15 ರ ಪ್ರಕಾರ ರಿಜಿಸ್ಟ್ರಾರ್, ಸಹಾಯಕ ರಿಜಿಸ್ಟ್ರಾರ್ ಅಥವಾ ಸಕ್ಷಮ ಅಧಿಕಾರಿಯಂತಹ ನಿರ್ದಿಷ್ಟ ಅಧಿಕಾರಿ ಮಾತ್ರ ಅಧಿಕ ಬಡ್ಡಿ ವಸೂಲಿ ಮಾಡುವವರ ಮೇಲೆ ದಾಳಿ ನಡೆಸಿ ಶೋಧನೆ ನಡೆಸುವ ಮತ್ತು ಜಪ್ತಿ ಮಾಡುವ ಅಧಿಕಾರ ಹೊಂದಿದ್ದಾರೆ. ಪೊಲೀಸರಿಗೆ ಆ ಅಧಿಕಾರ ಇಲ್ಲ ಎಂದು ಕೋರ್ಟ್ ಸ್ಪಷ್ಟಪಡಿಸಿದೆ.
ಈ ಪ್ರಕರಣದಲ್ಲಿ ಕಾನೂನು ಪ್ರಕ್ರಿಯೆ ಪಾಲಿಸದೆ ಎಫ್ಐಆರ್ ಮತ್ತು ಆರೋಪ ಪಟ್ಟಿ ದಾಖಲಿಸಿದ್ದು, ಹಾಗಾಗಿ ಅಧೀನ ನ್ಯಾಯಾಲಯದ ವಿಚಾರಣಾ ಪ್ರಕ್ರಿಯೆ ರದ್ದುಪಡಿಸಿ ಹೈಕೋರ್ಟ್ ಆದೇಶಿಸಿದೆ.