
ಶುಕ್ರವಾರ ಬೆಳಿಗ್ಗೆ ಸುದ್ದಿ ವಾಹಿನಿ ಸಂಪಾದಕರೊಬ್ಬರು ಆರತಕ್ಷತೆ ಆಹ್ವಾನದ ಚಿತ್ರವನ್ನು ಟ್ವೀಟ್ ಮಾಡಿ, `ಲವ್ ಜಿಹಾದ್’ ಮತ್ತು `ಆಕ್ಟ್ ಆಫ್ ಟೆರರಿಸಂ’ ಎಂಬ ಹ್ಯಾಶ್‌ಟ್ಯಾಗ್‌ಗಳನ್ನು ಬಳಸಿಕೊಂಡು ಶ್ರದ್ದಾ ಹತ್ಯೆ ಪ್ರಕರಣಕ್ಕೆ ಲಿಂಕ್ ಮಾಡಿದ್ದರು. ವಸಾಯಿ ಪಶ್ಚಿಮ ಪ್ರದೇಶದ ಸಭಾಂಗಣದಲ್ಲಿ ಭಾನುವಾರ ಸಂಜೆ ಆರತಕ್ಷತೆ ಕಾರ್ಯಕ್ರಮ ನಡೆಯಬೇಕಿತ್ತು.
ಟ್ವೀಟ್ ವೈರಲ್ ಆದ ನಂತರ, ವಸೈನಲ್ಲಿರುವ ಸ್ಥಳೀಯ ಹಿಂದೂ ಮತ್ತು ಮುಸ್ಲಿಂ ಸಂಘಟನೆಗಳು ಸಭಾಂಗಣದ ಮಾಲೀಕರಿಗೆ ಕರೆ ಮಾಡಿ, ಪ್ರದೇಶದಲ್ಲಿ ಶಾಂತಿಗಾಗಿ ಕಾರ್ಯಕ್ರಮವನ್ನು ರದ್ದುಗೊಳಿಸುವಂತೆ ಕೇಳಿಕೊಂಡರು ಎಂದು ಅಧಿಕಾರಿ ತಿಳಿಸಿದ್ದಾರೆ. ದಂಪತಿಯ ಕುಟುಂಬಗಳು ಶನಿವಾರ ಮಾಣಿಕಪುರ ಠಾಣೆಗೆ ಭೇಟಿ ನೀಡಿದ್ದು ಆರತಕ್ಷತೆಯನ್ನು ತಡೆಹಿಡಿಯಲಾಗಿದೆ ಎಂದು ತಿಳಿಸಿದರು.
ಹಿಂದೂ ಮಹಿಳೆಗೆ 29 ವರ್ಷ, ಆಕೆಯ ಪತಿ ಮುಸ್ಲಿಂ 32 ವರ್ಷ ವಯಸ್ಸಿನವರಾಗಿದ್ದಾರೆ ಮತ್ತು ಇಬ್ಬರೂ ಕಳೆದ 11 ವರ್ಷಗಳಿಂದ ಪರಸ್ಪರ ಪರಿಚಿತರಾಗಿದ್ದರು ಎಂದು ಪೊಲೀಸ್ ಅಧಿಕಾರಿ ತಿಳಿಸಿದ್ದಾರೆ. ಎರಡೂ ಕುಟುಂಬಗಳ ಸದಸ್ಯರು ಅವರ ಸಂಬಂಧವನ್ನು ಬೆಂಬಲಿಸಿದ್ದರು. ನೂತನ ದಂಪತಿಗಳು ನವೆಂಬರ್ 17 ರಂದು ನ್ಯಾಯಾಲಯದಲ್ಲಿ ರಿಜಿಸ್ಟರ್ಡ್ ಮ್ಯಾರೇಜ್ ಆಗಿದ್ದರು. ಭಾನುವಾರದ ಆರತಕ್ಷತೆಗೆ ಸುಮಾರು 200 ಅತಿಥಿಗಳನ್ನು ನಿರೀಕ್ಷಿಸಲಾಗಿತ್ತು ಎಂದು ಅವರು ಪೊಲೀಸರಿಗೆ ತಿಳಿಸಿದ್ದಾರೆ. ಈ ಪ್ರಕರಣದಲ್ಲಿ ಲವ್ ಜಿಹಾದ್ ಎಂದು ಕರೆಯಲ್ಪಡುವ ಯಾವುದೇ ಆಯಾಮವಿಲ್ಲ ಎಂದು ಅಧಿಕಾರಿ ಹೇಳಿದ್ದಾರೆ.