ವಿಮಾ ಪಾಲಿಸಿಗಳ ಪರಿಹಾರ ಮೊತ್ತವನ್ನು ಪಡೆಯಲು ಮೃತರ ಉತ್ತರಾಧಿಕಾರಿಗಳು ಮನವಿ ಸಲ್ಲಿಸಿದ ಪಕ್ಷದಲ್ಲಿ, ವಿಮೆಗೆ ನಾಮನಿರ್ದೇಶಿತರಾದವರಿಗೆ (ನಾಮಿನಿ) ಸಂಪೂರ್ಣ ಪರಿಹಾರ ಪಡೆಯುವ ಹಕ್ಕು ಇರುವುದಿಲ್ಲ ಎಂದು ಹೈಕೋರ್ಟ್ ಸ್ಪಷ್ಟಪಡಿಸಿದೆ.
ತಮ್ಮ ಮಗನ ವಿಮೆಗೆ ನಾಮನಿರ್ದೇಶಿತರಾಗಿದ್ದ ಗದಗ ಜಿಲ್ಲೆಯ ಲಕ್ಷ್ಮೀಶ್ವರ ತಾಲ್ಲೂಕಿನ ಯಲ್ಲಾಪುರ ನಿವಾಸಿ ನೀಲವ್ವ (61) ಸಲ್ಲಿಸಿದ್ದ ಅರ್ಜಿ (ಆರ್ಎಫ್ಎ) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಅನಂತ ರಾಮನಾಥ ಹೆಗಡೆ ಅವರಿದ್ದ ಏಕಸದಸ್ಯ ನ್ಯಾಯಪೀಠ (ಧಾರವಾಡ) ಈ ಕುರಿತಂತೆ ಇತ್ತೀಚೆಗೆ ಆದೇಶಿಸಿದೆ.
“ನಾಮ ನಿರ್ದೇಶನಗಳನ್ನು ನಿಯಂತ್ರಿಸುವ ವಿಮಾ ಕಾಯ್ದೆ-1938ರ ಕಲಂ 39, ವೈಯಕ್ತಿಕ ಉತ್ತರಾಧಿಕಾರ ಕಾನೂನಾದ ಹಿಂದೂ ಉತ್ತರಾಧಿಕಾರ ಕಾಯ್ದೆ-1956ಕ್ಕೆ ತದ್ವಿರುದ್ಧವಾಗಿರುವುದಿಲ್ಲ. ಹೀಗಾಗಿ, ವಿಮೆಯಲ್ಲಿರುವ ಪರಿಹಾರ ಪ್ರಯೋಜನ ಪಡೆಯುವಲ್ಲಿ ನಾಮನಿರ್ದೇಶಿತರೊಂದಿಗೆ ಕಾನೂನುಬದ್ಧ ಉತ್ತರಾಧಿಕಾರಿಗಳೂ ಹಕ್ಕು ಹೊಂದಿರುತ್ತಾರೆ” ಎಂದು ನ್ಯಾಯಪೀಠ ಹೇಳಿದೆ.
“ಕಾನೂನುಬದ್ಧ ಉತ್ತರಾಧಿಕಾರಿಗಳು ವಿಮೆಯ ಪರಿಹಾರಕ್ಕೆ ಮನವಿ ಸಲ್ಲಿಸದಿದ್ದರೆ ಮಾತ್ರ ನಾಮನಿರ್ದೇಶಿತರು ವಿಮೆಯ ಪರಿಹಾರದ ಹಕ್ಕನ್ನು ಹೊಂದಿರುತ್ತಾರೆ” ಎಂದು ನ್ಯಾಯಪೀಠ ಸ್ಪಷ್ಟಪಡಿಸಿದೆ.