ಮೈಸೂರು: ವಿಮೆ ಹಣಕ್ಕಾಗಿ ಪುತ್ರನೇ ತಂದೆಯನ್ನು ದೊಣ್ಣೆಯಿಂದ ಹೊಡೆದು ಕೊಲೆ ಮಾಡಿದ ಘಟನೆ ಬೈಲುಕುಪ್ಪೆ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.
ಪಿರಿಯಾಪಟ್ಟಣ ತಾಲೂಕಿನ ಕೊಪ್ಪ ಸಮೀಪದ ಡೋಂಗ್ರಿ ಗೇರಾಸಿ ಕಾಲೋನಿ ನಿವಾಸಿ ಅಣ್ಣಪ್ಪ(55) ಕೊಲೆಯಾದವರು. ಡಿಸೆಂಬರ್ 25 ರಂದು ಬೈಲುಕುಪ್ಪೆ ಸಮೀಪದ ಗುಳ್ಳೇದಳ್ಳ ಅರಣ್ಯ ಪ್ರದೇಶದಲ್ಲಿ ಅವರು ಶವವಾಗಿ ಪತ್ತೆಯಾಗಿದ್ದು, ಪ್ರಕರಣ ದಾಖಲಿಸಿಕೊಂಡ ಪೊಲೀಸರು ತನಿಖೆ ನಡೆಸಿದ್ದಾರೆ.
ಪೊಲೀಸ್ ಇನ್ಸ್ಪೆಕ್ಟರ್ ದೀಪಕ್ ಮತ್ತು ಪಿಎಸ್ಐ ಅಜಯ್ ಕುಮಾರ್ ಅವರು ತನಿಖೆ ನಡೆಸಿ ಅನುಮಾನಾಸ್ಪದವಾಗಿ ವರ್ತಿಸುತ್ತಿದ್ದ ಅಣ್ಣಪ್ಪ ಅವರ ಪುತ್ರ ಪಾಂಡುನನ್ನು ವಿಚಾರಣೆಗೆ ಒಳಪಡಿಸಿದಾಗ ಕೊಲೆ ರಹಸ್ಯ ಬಯಲಾಗಿದೆ. ಎಲ್ಐಸಿಯಲ್ಲಿ ತಂದೆ ಹೆಸರಲ್ಲಿ 30 ಲಕ್ಷ ರೂಪಾಯಿ ವಿಮೆ ಮಾಡಿಸಿದ್ದು, ಅವರ ಮರಣದ ನಂತರ ಬರುವ ವಿಮೆ ಹಣಕ್ಕಾಗಿ ಕೊಲೆ ಮಾಡಿರುವುದಾಗಿ ವಿಚಾರಣೆ ವೇಳೆ ಒಪ್ಪಿಕೊಂಡಿದ್ದಾನೆ ಎನ್ನಲಾಗಿದೆ. ಪೊಲೀಸರು ಆರೋಪಿಯನ್ನು ಬಂಧಿಸಿ ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.