ಬಾಗಲಕೋಟೆ: ತಾಂತ್ರಿಕ ಕಾರಣ ನೀಡಿ ವಿಮೆ ಹಣ ಪಾವತಿಸಲು ನಿರಾಕರಿಸಿದ ವಿಮಾ ಕಂಪನಿಗೆ ಜಿಲ್ಲಾ ಗ್ರಾಹಕರ ಆಯೋಗ ದಂಡ ವಿಧಿಸಿದೆ.
ಪವನಕುಮಾರ ಭಜಂತ್ರಿ ಅವರು ಸ್ಟಾರ್ ಹೆಲ್ತ್ ಇನ್ಶೂರೆನ್ಸ್ ಕಂಪನಿಯಲ್ಲಿ ಕೋವಿಡ್ ವಿಮೆ ಪಾಲಿಸಿ ಮಾಡಿಸಿದ್ದರು. 2021ರ ಅಕ್ಟೋಬರ್ ನಲ್ಲಿ ಅವರಿಗೆ ಕೊರೋನಾ ಪಾಸಿಟಿವ್ ವರದಿ ಬಂದ ವೇಳೆ ಐದು ದಿನ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಿಡುಗಡೆಯಾಗಿದ್ದರು.
ನಂತರ ಅವರು ವಿಮೆ ಪಡೆಯಲು ಅರ್ಜಿ ಸಲ್ಲಿಸಿದಾಗ ಮಾರ್ಗಸೂಚಿಯ ಅನ್ವಯ ಸ್ವಲ್ಪಮಟ್ಟಿನ ಸೋಂಕು ಇದ್ದಲ್ಲಿ ಮನೆಯಲ್ಲೇ ಚಿಕಿತ್ಸೆ ಪಡೆದುಬೇಕೆಂದು ನೆಪವಡ್ಡಿ ವಿಮೆ ಕಂಪನಿ ಅವರ ಅರ್ಜಿಯನ್ನು ರದ್ದುಗೊಳಿಸಿದ್ದರಿಂದ ಜಿಲ್ಲಾ ಗ್ರಾಹಕರ ಆಯೋಗದ ಮೆಟ್ಟಿಲೇರಿದ್ದರು.
ಅವರ ದೂರಿನ ವಿಚಾರಣೆ ನಡೆಸಿದ ಆಯೋಗ, ಚಿಕಿತ್ಸೆ ಹೇಗಿರಬೇಕೆಂದು ನಿರ್ಧರಿಸುವಲ್ಲಿ ವೈದ್ಯರ ಪಾತ್ರ ಪ್ರಮುಖವಾಗಿದೆ ಎಂದು ಹೇಳಿದೆ. ಕೈಲಾಶ್ ಚಂದ್ರ ಪ್ರಕರಣ ಆಧರಿಸಿ ಗ್ರಾಹಕ ಪವನಕುಮಾರ ಭಜಂತ್ರಿ ಅವರಿಗೆ 45 ದಿನಗಳ ಒಳಗೆ 2.5 ಲಕ್ಷ ರೂ. ಬಡ್ಡಿ ಸಮೇತ ನೀಡಬೇಕು ಎಂದು ಜಿಲ್ಲಾ ಗ್ರಾಹಕರ ಆಯೋಗ ಆದೇಶ ನೀಡಿದೆ.