ಮಕ್ಕಳಿರುವ ಮನೆ ಹೇಗಿರುತ್ತೆ, ಅಲ್ಲಿ ಎಷ್ಟು ಆಟಿಕೆ ಇರುತ್ತೆ ಎಂಬುದನ್ನು ವಿವರಿಸಬೇಕಿಲ್ಲ. ಹೊಸ ಹೊಸ ಆಟಿಕೆಗಳು ಬರುತ್ತಿದ್ದಂತೆ ಹಳೆಯ ಆಟಿಕೆಗಳು ಮೂಲೆಗುಂಪಾಗುತ್ತವೆ. ಮಗುವಿನ ಆಟಿಕೆಯನ್ನು ಸರಿಯಾಗಿ ಜೋಡಿಸಿಡುವುದೇ ತಲೆನೋವಿನ ಕೆಲಸ. ಮಗು ದೊಡ್ಡದಾಗುತ್ತಿದ್ದ ಹಾಗೆ ಸುಂದರವಾದ ಪುಟ್ಟ ಪುಟ್ಟ ಆಟಿಕೆಗಳು ಕೆಲವರ ಮನೆ ಅಟ್ಟ ಸೇರಿದ್ರೆ ಮತ್ತೆ ಕೆಲವರು ಕಸಕ್ಕೆ ಹಾಕ್ತಾರೆ. ಆದ್ರೆ ಕಸಕ್ಕೆ ಹಾಕುವ ಬದಲು ಆಟಿಕೆಗಳನ್ನು ಮರುಬಳಕೆ ಮಾಡುವ ಹೊಸ ಮಾರ್ಗ ಅನುಸರಿಸಬಹುದು.
ಹಳೆಯ ಆಟಿಕೆಯನ್ನು ಹಾಗೆ ಇಡುವ ಬದಲು ಅದನ್ನು ಅವಶ್ಯವಿರುವ ಮಕ್ಕಳಿಗೆ ದಾನಮಾಡಿ. ಹೀಗೆ ಮಾಡಿದಲ್ಲಿ ಹಲವು ಮಕ್ಕಳ ಮುಖದಲ್ಲಿ ನಗು ಮೂಡುತ್ತದೆ. ಹಳೆಯ, ಒಳ್ಳೆಯ ಕಂಡೀಶನ್ ನಲ್ಲಿ ಇರುವ ಆಟಿಕೆಗಳನ್ನು ಎನ್ ಜಿ ಓ ಗಳು ದಾನದ ರೂಪದಲ್ಲಿ ತೆಗೆದುಕೊಳ್ಳುತ್ತವೆ. ಹಾಗಾಗಿ ಹಳೆಯ ಬ್ಲಾಕ್ಸ್, ಬೋರ್ಡ್ ಗೇಮ್, ಪಜಲ್ಸ್, ಸ್ಟಫ್ಡ್ ಎನಿಮಲ್, ಕಾರು, ಕ್ರಾಫ್ಟ್ ಕಿಟ್, ಸ್ಪೋರ್ಟ್ಸ್ ಕಿಟ್, ಎಕ್ಟಿವಿಟಿ ಬುಕ್ ಮುಂತಾದವುಗಳನ್ನು ದಾನ ಮಾಡಬಹುದು. ದಾನ ಮಾಡುವ ಮೊದಲು ಕೆಲವೊಂದು ಮಾಹಿತಿ ಪಡೆಯುವುದು ಬಹಳ ಮುಖ್ಯ.
ಅನಾಥ ಮಕ್ಕಳ ನೆರವಿಗೆ ನಿಲ್ಲುವ ಹಲವು ಚ್ಯಾರಿಟಿಗಳು ಆಟಿಕೆಗಳನ್ನು ದಾನವಾಗಿ ಸ್ವೀಕರಿಸುತ್ತವೆ. ಅನಾಥಾಶ್ರಮವನ್ನು ನಡೆಸುವ ಇಂತಹ ಸಂಸ್ಥೆಗಳಿಗೆ ದಾನ ಮಾಡಬಹುದು. ಸುತ್ತ-ಮುತ್ತ ಬಡ ಮಕ್ಕಳಿದ್ದರೆ ನೇರವಾಗಿ ಅವರಿಗೆ ಆಟಿಕೆಗಳನ್ನು ನೀಡಬಹುದು.
ಮಹಿಳೆ ಅಥವಾ ಮಕ್ಕಳ ಆಶ್ರಯ ಮನೆಗೆ ಆಟಿಕೆಗಳನ್ನು ಕೊಡಬಹುದು. ಹಳೆ ಆಟಿಕೆಗಳು ಅವರಿಗೆ ದೊಡ್ಡ ಉಡುಗೊರೆಯೇ ಆಗಿರುತ್ತದೆ. ಇಂಟರ್ ನೆಟ್ ನಲ್ಲಿ ಶೆಲ್ಟರ್ ಹೌಸ್ ಗಳನ್ನು ಹುಡುಕಿ ಅವುಗಳಿಗೆ ದಾನ ನೀಡಬಹುದು.
ಹಲವು ಮಕ್ಕಳ ಆಸ್ಪತ್ರೆಗಳು ಮಕ್ಕಳ ಆಟಿಕೆಗಳನ್ನು ತೆಗೆದುಕೊಳ್ಳುತ್ತವೆ. ಅಂತಹ ಆಸ್ಪತ್ರೆಗಳಲ್ಲಿ ಮಕ್ಕಳಿಗೆ ಚಿಕಿತ್ಸೆ ಕೊಡುವಾಗ ಆಟಿಕೆಗಳನ್ನು ಅವರ ಕೈಗೆ ಕೊಡುತ್ತಾರೆ. ಹಾಗಾಗಿ ಒಳ್ಳೆಯ ಕಂಡೀಶನ್ ನಲ್ಲಿರುವ ಆಟಿಕೆಯನ್ನು ಆಸ್ಪತ್ರೆಗೆ ದಾನ ಮಾಡಬಹುದು.
ರಸ್ತೆಯ ಬದಿಯಲ್ಲಿ ಜೀವನ ನಡೆಸುವ ಅನೇಕ ಸಂಸಾರಗಳಿವೆ. ಅವರ ಮಕ್ಕಳಿಗೆ ಆಟಿಕೆಗಳು ಇರುವುದಿಲ್ಲ. ಅಂತವರಿಗೆ ಆಟಿಕೆಗಳನ್ನು ಕೊಟ್ಟು ಅವರ ಮುಖದಲ್ಲಿ ನಗು ಮೂಡುವಂತೆ ಮಾಡಬಹುದು. ಇದು ಅವರಿಗೆ ಮಾತ್ರವಲ್ಲ ನಿಮಗೂ ಖುಷಿ ನೀಡುತ್ತದೆ.