ನೇತಾಜಿ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಇಂಡಿಯಾ ಗೇಟ್‌ನಲ್ಲಿ ಸ್ಥಾಪಿಸುವುದರಿಂದ ಕೇಂದ್ರದ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ ಎಂದು ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಕೇಂದ್ರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ. ನಮ್ಮ ಒತ್ತಡದಿಂದ ಪ್ರತಿಮೆ ಕೆಲಸ ನಡೆಯುತ್ತಿದೆ, ಪ್ರತಿಮೆಯನ್ನು ಸ್ಥಾಪಿಸುವುದರಿಂದ ನಿಮ್ಮ ಜವಾಬ್ದಾರಿ ಕೊನೆಗೊಳ್ಳುವುದಿಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ಕೇವಲ ನೇತಾಜಿಯವರ ಪ್ರತಿಮೆಯನ್ನು ರಚಿಸುವುದರಿಂದ ಕೇಂದ್ರ ಸರ್ಕಾರದ ಕೆಲಸಗಳು ಕೊನೆಗೊಳ್ಳುವುದಿಲ್ಲ. ಪ್ರತಿಮೆ ಸ್ಥಾಪಿಸುವ ಮೂಲಕ ಅವರಿಗೆ ಗೌರವ ನೀಡುತ್ತಿದ್ದಾರೆ ಎಂದು ಅರ್ಥವಲ್ಲ ಎಂದು ಮಮತಾ ಬ್ಯಾನರ್ಜಿ ಹೇಳಿದ್ದಾರೆ.
ನೇತಾಜಿ ಸಾವಿನ ದಿನಾಂಕ ಇನ್ನೂ ತಿಳಿದಿಲ್ಲ, ನೇತಾಜಿಗೆ ಏನಾಯಿತು ಎಂದು ನಮಗೆ ಗೊತ್ತಿಲ್ಲಾ, ಇದು ಇನ್ನೂ ನಿಗೂಢವಾಗಿದೆ. ಕೇಂದ್ರ ಸರ್ಕಾರವು ಅವರ ಸಾವಿಗೆ ಸಂಬಂಧಪಟ್ಟ ಕಡತಗಳನ್ನು ಡಿಕ್ಲಾಸಿಫೈ ಮಾಡುವುದಾಗಿ ಹೇಳಿಕೆ ನೀಡಿತ್ತು, ನಾವು ನೇತಾಜಿಯ ಕುರಿತಾದ ಕಡತಗಳನ್ನು ಡಿಜಿಟಲೀಕರಣಗೊಳಿಸಿದ್ದೇವೆ ಮತ್ತು ಡಿಕ್ಲಾಸಿಫೈಡ್ ಮಾಡಿದ್ದೇವೆ ಎಂದು ಹೇಳಿದ್ದಾರೆ ಆದರೆ ಅದು ಕಾಣುತ್ತಿಲ್ಲವಲ್ಲ ಎಂದು ಮಮತಾ ಬ್ಯಾನರ್ಜಿ ಕೆಂದ್ರದ ವಿರುದ್ಧ ವಾಗ್ದಾಳಿ ಮುಂದುವರೆಸಿದ್ದಾರೆ.
ಸುಭಾಷ್ ಚಂದ್ರ ಬೋಸ್ ಅವರ ಜಯಂತಿಯ ದಿನದಂದು, ನೇತಾಜಿ ಹೆಸರಲ್ಲಿ ವಿಶ್ವವಿದ್ಯಾಲಯ ತೆರೆಯುವುದಾಗಿ ಘೋಷಿಸಿದ ಮಮತಾ ಬ್ಯಾನರ್ಜಿ, ಭಾರತೀಯ ರಾಷ್ಟ್ರೀಯ ಸೇನೆಯ (ಐಎನ್‌ಎ) ಸ್ಮರಣಾರ್ಥ ಸ್ಮಾರಕವನ್ನು ಸ್ಥಾಪಿಸುವ ಭರವಸೆ ನೀಡಿದ್ದಾರೆ.