![](https://kannadadunia.com/wp-content/uploads/2023/07/106-784x441-1.jpg)
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರು ಶನಿವಾರ ತಮಿಳುನಾಡಿನ ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ಗೆ ಭೇಟಿ ನೀಡಿದ್ದರು. ಈ ವೇಳೆ ಅವರು ವಂದೇ ಭಾರತ್ ರೈಲಿನ ಹೊಸ ಬಣ್ಣದ ಯೋಜನೆಗೆ ಪರಿಶೀಲನೆ ನಡೆಸಿ ಅನುಮೋದನೆ ನೀಡಿದರು. ಚೆನ್ನೈನಲ್ಲಿರುವ ಇಂಟಿಗ್ರಲ್ ಕೋಚ್ ಫ್ಯಾಕ್ಟರಿಯಲ್ಲಿ ಸೆಮಿ ಹೈಸ್ಪೀಡ್ ನ ವಂದೇ ಭಾರತ್ ರೈಲುಗಳ ತಯಾರಿಕೆ ನಡೆಯುತ್ತಿದೆ.
ರೈಲ್ವೆ ಅಧಿಕಾರಿಗಳ ಪ್ರಕಾರ ಸೆಮಿ ಹೈಸ್ಪೀಡ್ ರೈಲಿನ 28 ನೇ ರೇಕ್ ‘ಕೇಸರಿ’ ಬಣ್ಣದಲ್ಲಿರಲಿದೆ. ಆದಾಗ್ಯೂ ಹೊಸದಾಗಿ ತಯಾರಿಸಲಾದ ಕೇಸರಿ ಬಣ್ಣದ ವಂದೇ ಭಾರತ್ ಎಕ್ಸ್ ಪ್ರೆಸ್ ಇನ್ನೂ ಕಾರ್ಯನಿರ್ವಹಿಸುತ್ತಿಲ್ಲ . ಅದನ್ನು ಚೆನ್ನೈನ ಇಂಟೆಗ್ರಲ್ ಕೋಚ್ ಫ್ಯಾಕ್ಟರಿ (ಐಸಿಎಫ್) ನಲ್ಲಿ ಇರಿಸಲಾಗಿದೆ.
ಇಂಟೆಗ್ರಲ್ ಕೋಚ್ ಫ್ಯಾಕ್ಟರಿಯನ್ನು ಪರಿಶೀಲಿಸಿದ ಅಶ್ವಿನಿ ವೈಷ್ಣವ್ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲಿನ ಹೊಸ ಬಣ್ಣವು ಭಾರತೀಯ ತ್ರಿವರ್ಣ ಧ್ವಜದಿಂದ ಪ್ರೇರಿತವಾಗಿದೆ ಎಂದು ಹೇಳಿದರು. ವಂದೇ ಭಾರತ್ ರೈಲುಗಳಲ್ಲಿ 25 ಸುಧಾರಣೆಗಳನ್ನು ಮಾಡಲಾಗಿದೆ ಎಂದು ಅವರು ಒತ್ತಿ ಹೇಳಿದರು.
ವಂದೇ ಭಾರತ್ ರೈಲು ಮೇಕ್ ಇನ್ ಇಂಡಿಯಾದ ಪರಿಕಲ್ಪನೆಯಾಗಿದೆ. ಅಂದರೆ ಇವುಗಳನ್ನು ಭಾರತದಲ್ಲಿ ವಿನ್ಯಾಸಗೊಳಿಸಲಾಗಿದೆ. ನಮ್ಮದೇ ಎಂಜಿನಿಯರ್‌ಗಳು ಮತ್ತು ತಂತ್ರಜ್ಞರು ಇದರ ತಯಾರಕರಾಗಿದ್ದಾರೆ. ಹಾಗಾಗಿ ವಂದೇ ಭಾರತ್ ಕಾರ್ಯಾಚರಣೆಯ ಸಮಯದಲ್ಲಿ ಎಸಿಗಳು, ಶೌಚಾಲಯಗಳು ಇತ್ಯಾದಿಗಳ ಬಗ್ಗೆ ಕ್ಷೇತ್ರ ಘಟಕಗಳಿಂದ ನಾವು ಪ್ರತಿಕ್ರಿಯೆಯನ್ನು ಸ್ವೀಕರಿಸುತ್ತಿದ್ದೇವೆ ಮತ್ತು ಆ ಎಲ್ಲಾ ಸುಧಾರಣೆಗಳನ್ನು ವಿನ್ಯಾಸದಲ್ಲಿ ಬದಲಾವಣೆಗಳನ್ನು ಮಾಡಲು ಬಳಸಲಾಗುತ್ತಿದೆ ಎಂದು ವೈಷ್ಣವ್ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಹೇಳಿದರು.
ಪ್ರಸ್ತುತ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ನೀಲಿ ಪಟ್ಟಿಗಳೊಂದಿಗೆ ಬಿಳಿ ಬಣ್ಣವನ್ನು ಹೊಂದಿದೆ. ಹೊಸದಾಗಿ ತಯಾರಿಸಲಾದ ವಂದೇ ಭಾರತ್ ರೈಲುಗಳಿಗೆ ಕೇಸರಿ, ಬಿಳಿ ಮತ್ತು ಕಪ್ಪು ಬಣ್ಣದ ಸಂಯೋಜನೆಯನ್ನು ನೀಡಲಾಗಿದೆ.