ಒಂದು ಸಿನೆಮಾ ಸಾಮಾಜಿಕ ಸ್ವಾಸ್ಥ್ಯವನ್ನು ಉತ್ತಮಗೊಳಿಸಬಲ್ಲದು. ಹಲವಾರು ಜೀವನದಲ್ಲಿ ಸುಧಾರಣೆ ತರಬಹುದು. ಬಾಲಿವುಡ್ ನಟ ಅಭಿಷೇಕ್ ಬಚ್ಚನ್ ನಟಿಸಿರುವ ದಾಸ್ವಿ ಎಂಬ ಚಿತ್ರದಿಂದ ಪ್ರೇರೇಪಣೆಗೊಂದ ಆಗ್ರಾದ ಕೇಂದ್ರ ಕಾರಾಗೃಹದ 9 ಖೈದಿಗಳು 10 ನೇ ತರಗತಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಜೈಲಿನಲ್ಲಿದ್ದ ರಾಜಕಾರಣಿಯೊಬ್ಬ 10 ನೇ ತರಗತಿಯನ್ನು ಪಾಸಾಗಿದ್ದರ ಚಿತ್ರಣವನ್ನು ಹೊಂದಿದ ಚಿತ್ರ ಇದಾಗಿದೆ. ಈ ಚಿತ್ರವನ್ನು ಜೈಲಿನಲ್ಲಿರುವ ಖೈದಿಗಳಿಗೂ ತೋರಿಸಲಾಗಿತ್ತು.
ಇದರಿಂದ ಪ್ರೇರೇಪಿತಗೊಂಡ 12 ಖೈದಿಗಳು 2022 ರ 10 ನೇ ತರಗತಿ ಪರೀಕ್ಷೆಯನ್ನೂ ತೆಗೆದುಕೊಂಡಿದ್ದರು. ಈ ಪೈಕಿ 9 ಮಂದಿ ಉತ್ತೀರ್ಣರಾಗಿದ್ದಾರೆ. ಖೈದಿಗಳ ಈ ಸಾಧನೆಯನ್ನು ಗಮನಿಸಿದ ಅಭಿಷೇಕ್ ಬಚ್ಚನ್ ಅವರಿಗೆ ಶುಭಾಶಯಗಳನ್ನು ತಿಳಿಸಿದ್ದಾರೆ.
ಈ ಬಗ್ಗೆ ಮಾತನಾಡಿರುವ ಆಗ್ರಾ ಕೇಂದ್ರ ಕಾರಾಗೃಹದ ಅಧೀಕ್ಷಕ ವಿ.ಕೆ. ಸಿಂಗ್ ಅವರು, ನಮ್ಮ ಜೈಲಿನಲ್ಲಿ ದಾಸ್ವಿ ಚಿತ್ರವನ್ನು ಪ್ರದರ್ಶಿಸಿದ ನಂತರ ಖೈದಿಗಳು 10 ನೇ ತರಗತಿ ಪರೀಕ್ಷೆ ಬರೆಯುವ ಆಸಕ್ತಿ ತೋರಿದರು. 12 ಮಂದಿ ಈ ಅವಕಾಶ ಪಡೆದರು. ಈ ಪೈಕಿ ಪಾಸಾದ 9 ಖೈದಿಗಳಲ್ಲಿ ಮೂವರು ಮೊದಲ ದರ್ಜೆಯಲ್ಲಿ ಪಾಸಾಗಿದ್ದರೆ, ಆರು ಮಂದಿ ದ್ವಿತೀಯ ದರ್ಜೆಯಲ್ಲಿ ಪಾಸಾಗಿದ್ದಾರೆ ಎಂದು ತಿಳಿಸಿದ್ದಾರೆ.
ಮತ್ತೊಂದೆಡೆ, ಮೂವರು 12 ನೇ ತರಗತಿ ಪರೀಕ್ಷೆಯನ್ನು ಬರೆದು ದ್ವಿತೀಯ ದರ್ಜೆಯಲ್ಲಿ ಉತ್ತೀರ್ಣರಾಗಿದ್ದಾರೆ. ಪರೀಕ್ಷೆಗಳನ್ನು ಜೈಲಿನ ಕ್ಯಾಂಪಸ್ ನಲ್ಲಿಯೇ ನಡೆಸಲಾಗಿದ್ದು, ತಮ್ಮ ಮನ ಪರಿವರ್ತನೆಗೆ ದಾಸ್ವಿ ಚಿತ್ರ ಪ್ರೇರಣೆಯಾಗಿದೆ ಎಂದು ಪಾಸಾಗಿರುವ ಖೈದಿಗಳು ಹೇಳಿಕೊಂಡಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅಭಿಷೇಕ್ ಬಚ್ಚನ್ ಈ ಚಿತ್ರ ಖೈದಿಗಳ ಜೀವನದಲ್ಲಿ ಸಕಾರಾತ್ಮಕ ಬದಲಾವಣೆ ತಂದಿರುವುದಕ್ಕೆ ಸಂತಸ ತಂದಿದೆ ಎಂದಿದ್ದಾರೆ.