ದೆಹಲಿ ಪೊಲೀಸ್ ಇಲಾಖೆಯಲ್ಲಿ ದಶಕಕ್ಕೂ ಹೆಚ್ಚಿನ ಅವಧಿಯಿಂದ ಪೇದೆಯಾಗಿ ಕೆಲಸ ಮಾಡುತ್ತಿದ್ದ ರಾಮ್ ಭಜನ್ ಕುಮಾರ್ ಈ ಬಾರಿಯ ಕೇಂದ್ರ ಲೋಕಸೇವಾ ಆಯೋಗದ ನಾಗರಿಕ ಸೇವಾ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
ಸದ್ಯ ಹೆಡ್ ಕಾನ್ಸ್‌ಟಬಲ್ ಆಗಿ ಕೆಲಸ ಮಾಡುತ್ತಿರುವ ರಾಮ್, ನೈಋತ್ಯ ದೆಹಲಿ ಜಿಲ್ಲೆಯ ಸೈಬರ್ ಘಟಕದಲ್ಲಿ ಕರ್ತವ್ಯದಲ್ಲಿದ್ದಾರೆ. ತಮ್ಮ 8ನೇ ಪ್ರಯತ್ನದಲ್ಲಿ 667 ನೇ ರ‍್ಯಾಂಕ್ ಪಡೆದು ರಾಮ್ ನಾಗರಿಕ ಸೇವೆಗೆ ಆಯ್ಕೆಯಾಗಿದ್ದಾರೆ.
2009ರಲ್ಲಿ ದೆಹಲಿ ಪೊಲೀಸ್ ಇಲಾಖೆ ಸೇರಿದ ರಾಮ್, ಮೊದಲಿಗೆ ವಿಜಯ್‌ಘಾಟ್‌ನಲ್ಲಿ ಕೆಲಸಕ್ಕೆ ನಿಯೋಜನೆಗೊಂಡಿದ್ದರು. ಓಬಿಸಿ ವರ್ಗಕ್ಕೆ ಸೇರಿದ ರಾಮ್ ಒಟ್ಟಾರೆ ಒಂಬತ್ತು ಪ್ರಯತ್ನಗಳನ್ನು ಮಾಡಬಹುದಾಗಿದೆ.
ರಾಜಸ್ಥಾನ ಮೂಲದ ಇವರು ನಾಗರಿಕ ಸೇವಾ ಪರೀಕ್ಷೆಗೆಂದೇ ಪ್ರತಿನಿತ್ಯ ಆರು ಗಂಟೆಗಳ ಕಾಲ ಅಧ್ಯಯನ ಮಾಡುತ್ತಿದ್ದರು. ಪರೀಕ್ಷೆಗಳು ಸನಿಹವಾಗುತ್ತಲೇ ಒಂದು ತಿಂಗಳ ಕಾಲ ಕೆಲಸಕ್ಕೆ ರಜೆ ಹಾಕುತ್ತಿದ್ದ ರಾಮ್ ಹಿಂದಿನ ಪ್ರಯತ್ನಗಳಲ್ಲೂ ಪರವಾಗಿಲ್ಲ ಎನ್ನುವಷ್ಟು ಅಂಕ ಗಳಿಸಿದ್ದರಿಂದ ಪದೇ ಪದೇ ಉತ್ತೇಜಿತರಾಗಿ ಈ ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದಾರೆ.
“ದೆಹಲಿ ಪೊಲೀಸ್‌ನಲ್ಲಿ ಪೇದೆಯಾಗಿದ್ದ ಫಿರೋಜ಼್ ಆಲಂ ಅವರು 2019ರಲ್ಲಿ ನಾಗರಿಕ ಸೇವಾ ಪರೀಕ್ಷೆಯಲ್ಲಿ ಪಾಸಾಗಿ ಇದೀಗ ಎಸಿಪಿ ಆಗಿದ್ದಾರೆ. ಅವರು ವಾಟ್ಸಾಪ್ ಗ್ರೂಪ್ ಮೂಲಕ ನನ್ನಂತ ಯುಪಿಎಸ್‌ಸಿ ಆಕಾಂಕ್ಷಿಗಳಿಗೆ ಸ್ಪೂರ್ತಿಯಾಗಿದ್ದರು,” ಎಂದು ತಮಗೆ ಈ ಪರೀಕ್ಷೆ ತೆಗೆದುಕೊಳ್ಳಲು ಸ್ಪೂರ್ತಿ ಯಾರೆಂದು ತಿಳಿಸಿದ್ದಾರೆ ರಾಮ್.