
ಪೊಟ್ಯಾಸಿಯಮ್ ದೇಹಕ್ಕೆ ಅತ್ಯಂತ ಅಗತ್ಯವಾಗಿರುವ ಖನಿಜ. ಇದು ನರಗಳ ಕಾರ್ಯವನ್ನು ಸರಿಯಾಗಿ ನಿರ್ವಹಿಸುವುದರ ಜೊತೆಗೆ, ಸ್ನಾಯುವಿನ ಸಂಕೋಚನ ಮತ್ತು ದೇಹದಲ್ಲಿ ದ್ರವ ಸಮತೋಲನವನ್ನು ನಿಯಂತ್ರಿಸುತ್ತದೆ. ಪೊಟ್ಯಾಸಿಯಮ್‌ನ ಮತ್ತೊಂದು ಪ್ರಮುಖ ಕಾರ್ಯವೆಂದರೆ ಹೃದಯ ಬಡಿತಕ್ಕೆ ಸಹಾಯ ಮಾಡುವುದು.
ದೇಹದಲ್ಲಿ ಪೊಟ್ಯಾಸಿಯಮ್‌ನ ತೀವ್ರ ಕೊರತೆ ಉಂಟಾದಾಗ, ಇದನ್ನು ವೈದ್ಯಕೀಯ ಪರಿಭಾಷೆಯಲ್ಲಿ ಹೈಪೋಕಾಲೆಮಿಯಾ ಎಂದು ಕರೆಯಲಾಗುತ್ತದೆ ಮತ್ತು ವ್ಯಕ್ತಿಯ ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟವು ಪ್ರತಿ ಲೀಟರ್‌ಗೆ 3.6 ಮಿಲಿಮೋಲ್‌ಗಿಂತ ಕಡಿಮೆಯಾದಾಗ ಈ ಸ್ಥಿತಿಯು ಉದ್ಭವಿಸುತ್ತದೆ.
1. ರಾತ್ರಿಯಲ್ಲಿ ನಿದ್ರಾಹೀನತೆ: ದೇಹದಲ್ಲಿ ಪೊಟ್ಯಾಸಿಯಮ್ ಕೊರತೆಯಿದ್ದರೆ, ಇದರಿಂದ ಆತಂಕದ ಲಕ್ಷಣಗಳು ಸಹ ಹೆಚ್ಚಾಗುತ್ತವೆ. ಪರಿಣಾಮ ನಿದ್ರೆಯ ಮೇಲೆ ಪರಿಣಾಮ ಉಂಟಾಗುತ್ತದೆ. ರಾತ್ರಿ ನಿದ್ರಾಹೀನತೆ ಉಂಟಾಗಬಹುದು.
2. ಅಧಿಕ ರಕ್ತದೊತ್ತಡ: ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟವು ಕಡಿಮೆಯಿದ್ದರೆ, ರಕ್ತದೊತ್ತಡ ಹೆಚ್ಚಾಗಬಹುದು. ವಿಶೇಷವಾಗಿ ಹೆಚ್ಚು ಸೋಡಿಯಂ ಅಂದರೆ ಉಪ್ಪನ್ನು ಸೇವಿಸುವವರಲ್ಲಿ ಈ ಸಮಸ್ಯೆ ಕಾಣಿಸಿಕೊಳ್ಳುತ್ತದೆ. ಪೊಟ್ಯಾಸಿಯಮ್ ರಕ್ತನಾಳಗಳನ್ನು ಸಡಿಲಗೊಳಿಸುತ್ತದೆ, ಇದು ರಕ್ತದೊತ್ತಡವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೊಟ್ಯಾಸಿಯಮ್, ದೇಹದಲ್ಲಿ ಸೋಡಿಯಂ ಮಟ್ಟವನ್ನು ಕಾಪಾಡಿಕೊಳ್ಳಲು ಸಹಕರಿಸುತ್ತದೆ.
3. ಅನಿಯಮಿತ ಹೃದಯ ಬಡಿತ: ಹೃದಯ ಬಡಿತ ಅನಿಯಮಿತವಾಗಿದ್ದರೆ ಅದು ಹೈಪೋಕಾಲೆಮಿಯಾ ಅಥವಾ ಪೊಟ್ಯಾಸಿಯಮ್ ಕೊರತೆಯ ಸಂಕೇತವೂ ಆಗಿರಬಹುದು. ಹೃದಯ ಸ್ನಾಯುವಿನ ಸಂಕೋಚನವನ್ನು ನಿಯಂತ್ರಿಸುವಲ್ಲಿ ಪೊಟ್ಯಾಸಿಯಮ್ ಪ್ರಮುಖ ಪಾತ್ರ ವಹಿಸುತ್ತದೆ. ಆದ್ದರಿಂದ, ದೇಹದಲ್ಲಿ ಪೊಟ್ಯಾಸಿಯಮ್ ಮಟ್ಟವು ಕಡಿಮೆಯಿದ್ದರೆ, ಇದರಿಂದ ಹೃದಯದ ಲಯವು ಅನಿಯಮಿತವಾಗುತ್ತದೆ ಮತ್ತು ಕುಹರದ ಕಂಪನದಂತಹ ಮಾರಣಾಂತಿಕ ಕಾಯಿಲೆಗಳಿಗೆ ಇದು ಕಾರಣವಾಗಬಹುದು.
4. ಅತಿಯಾದ ಆಯಾಸ: ಪೊಟ್ಯಾಸಿಯಮ್ ದೇಹದ ಎಲ್ಲಾ ಜೀವಕೋಶಗಳು ಮತ್ತು ಅಂಗಾಂಶಗಳಲ್ಲಿ ಕಂಡುಬರುವ ಪ್ರಮುಖ ಪೋಷಕಾಂಶವಾಗಿದೆ. ಪೊಟ್ಯಾಸಿಯಮ್ ಮಟ್ಟ ಕಡಿಮೆಯಾದಾಗ ಅದು ದೇಹದ ಅನೇಕ ಕಾರ್ಯಗಳ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ. ಇದರಿಂದ ವ್ಯಕ್ತಿಯ ಶಕ್ತಿಯ ಮಟ್ಟವೂ ಕಡಿಮೆಯಾಗುತ್ತದೆ ಮತ್ತು ದೈಹಿಕವಾಗಿ ಮತ್ತು ಮಾನಸಿಕವಾಗಿ ತುಂಬಾ ದಣಿದ ಅನುಭವವಾಗುತ್ತದೆ.
5. ವಾಯು ಅಥವಾ ಮಲಬದ್ಧತೆ: ಪೊಟ್ಯಾಸಿಯಮ್ ಕೊರತೆಯಿಂದಾಗಿ ಕರುಳಿನಲ್ಲಿರುವ ಸ್ನಾಯುಗಳಿಗೂ ಸಮಸ್ಯೆಯಾಗುತ್ತದೆ. ಇದರಿಂದಾಗಿ ದೇಹದಿಂದ ಆಹಾರ ಮತ್ತು ತ್ಯಾಜ್ಯ ವಸ್ತುಗಳ ನಿರ್ಗಮನ ಪ್ರಕ್ರಿಯೆಯು ನಿಧಾನಗೊಳ್ಳುತ್ತದೆ. ಜೀರ್ಣಕ್ರಿಯೆಯ ಈ ಪ್ರಕ್ರಿಯೆಯು ಕರುಳಿನಲ್ಲಿ ನಿಧಾನಗೊಂಡರೆ, ಮಲಬದ್ಧತೆ ಮತ್ತು ಹೊಟ್ಟೆ ಉಬ್ಬರಿಸುವಿಕೆಯಂತಹ ಸಮಸ್ಯೆಗಳನ್ನು ಉಂಟುಮಾಡಬಹುದು.
ದೇಹದಲ್ಲಿ ಪೊಟ್ಯಾಶಿಯಂ ಕೊರತೆಯಾಗದಂತೆ ನೋಡಿಕೊಳ್ಳಲು ಆಲೂಗಡ್ಡೆ, ದಾಳಿಂಬೆ, ಅವಕಾಡೊ, ಗೆಣಸು, ಪಾಲಕ್ ಸೊಪ್ಪು, ಬೀನ್ಸ್, ಎಳನೀರು, ಬೀಟ್‌ರೂಟ್, ಸೋಯಾಬೀನ್ ಮತ್ತು ಟೊಮೆಟೊವನ್ನು ನಿಯಮಿತವಾಗಿ ಸೇವಿಸಬೇಕು.