ಜಗತ್ತಿನ ಎಲ್ಲ ನಗರಗಳೂ ತಂತಮ್ಮ ವೈಶಿಷ್ಟ್ಯತೆಗಳಿಂದ ತಮ್ಮದೇ ಗುರುತು ಹೊಂದಿವೆ. ಕೆಲವೊಂದು ನಗರಗಳು ಬೆಟ್ಟ-ಗುಡ್ಡಗಳ ನಡುವೆ ಇದ್ದರೆ ಕೆಲವು ನಗರಗಳು ಸಾಗರದ ಅಂಚಿನಲ್ಲಿರುತ್ತವೆ.
ಆಸ್ಟ್ರೇಲಿಯಾದಲ್ಲಿ ಭೂಮಿಯಾಳದಲ್ಲಿರುವ ಕೋಬರ್ ಪೆಡಿ ಎಂಬ ಪುಟ್ಟ ಪಟ್ಟಣವೊಂದು ತನ್ನ ವೈಶಿಷ್ಟ್ಯತೆಗಳಿಂದ ಭಾರೀ ಹೆಸರು ಮಾಡಿದೆ. ಈ ಊರಿನ ಜನರು ಭೂಗತ ವಾಸಿಗಳು. ಜಗತ್ತಿನ ಅತಿ ದೊಡ್ಡ ಓಪಲ್ ಮೂಲವಾಗಿದೆ ಈ ಊರು.
ಈ ಪ್ರದೇಶದಲ್ಲಿ ವಾಸಿಸುವ ಜನರು ಓಪಲ್ ಗಣಿಗಾರಿಕೆ ಕಲಿತು, ನಂತರದ ವರ್ಷಗಳಲ್ಲಿ ಇಲ್ಲಿಯೇ ವಾಸಿಸಲು ಆರಂಭಿಸಿದ್ದಾರೆ. 100 ವರ್ಷಗಳಿಂದಲೂ ಭೂಗತವಾಗಿ ವಾಸಿಸುತ್ತಿರುವ 2,500 ನಿವಾಸಿಗಳಿಗೆ ಮನೆಯಾಗಿದೆ ಈ ಪಟ್ಟಣ.
ಈ ಪಟ್ಟಣದಲ್ಲಿ ಕೇವಲ ಮನೆಗಳು ಮಾತ್ರವಲ್ಲದೇ ಅಂಗಡಿಗಳು, ಬುಕ್‌ಸ್ಟೋರ್‌ಗಳು, ಮಾಲ್‌ಗಳು, ಚರ್ಚ್ ಹಾಗೂ ಹೋಟೆಲ್‌ಗಳೂ ಇದ್ದು, ಅವೆಲ್ಲವೂ ಭೂಗತವಾಗಿವೆ.
ಇಲ್ಲಿನ ಮನೆಗಳಲ್ಲಿ ನೀರು, ವಿದ್ಯುತ್‌ಗಳಲ್ಲದೇ ಅಂತರ್ಜಾಲದ ಸೌಕರ್ಯಗಳೂ ಇದ್ದು, ಅತ್ಯಾಧುನಿಕ ಸವಲತ್ತುಗಳೆಲ್ಲಾ ಇವೆ. ಮೂವಿ ಥಿಯೇಟರ್ ಹಾಗೂ ಹಲ್ಲುರಹಿತ ಗಾಲ್ಪ್ ಕೋರ್ಸ್ ಸಹ ಈ ಊರಿನಲ್ಲಿವೆ. ಈ ಊರಿನ ಒಂದೇ ಒಂದು ಅನಾನುಕೂಲತೆ ಎಂದರೆ, ಬಿಸಿಲಿಗೆ ನೇರವಾಗಿ ತೆರೆದುಕೊಳ್ಳದೇ ಇರುವುದು.
ಮರುಭೂಮಿಯಲ್ಲಿರುವ ಕೂಬರ್ ಪೆಡಿಯಲ್ಲಿ ಮರಗಳು ಹಾಗೂ ಮೋಡಗಳ ಕೊರತೆಯ ಕಾರಣ ನೆಲದ ಮೇಲೆ ಬದುಕುಳಿಯುವುದು ಬಹಳ ಕಷ್ಟ. ಮಳೆಯೂ ಕಡಿಮೆ ಇರುವ ಕಾರಣ ಜನರು ಭೂಗತರಾಗಿ ಬದುಕಬೇಕಾಗಿ ಬಂದಿದೆ.
ಪ್ರವಾಸಿಗರಿಗೂ ಮುಕ್ತವಾಗಿರುವ ಈ ಊರನ್ನು ತಲುಪಲು ಕೋಚ್ ಟೂರ್ ಅಥವಾ ಖಾಸಗಿ ಕಾರುಗಳ ವ್ಯವಸ್ಥೆ ಮಾಡಿಕೊಳ್ಳಬೇಕು. ಪುಟ್ಟದೊಂದು ವಿಮಾನ ನಿಲುಗಡೆ ಜಾಗ ಹಾಗೂ ಸಣ್ಣದೊಂದು ರೈಲ್ವೇ ಮಾರ್ಗವೂ ಈ ಊರಿಗೆ ಸಂಪರ್ಕ ಕಲ್ಪಿಸಿವೆ.