ಬೆಂಗಳೂರು : ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ವಿನೂತನ ಚಿಂತನೆ ನಡೆಸಿರುವ ರಾಜ್ಯ ಸರ್ಕಾರ ಹಿರಿಯ ವಿದ್ಯಾರ್ಥಿಗಳ ಸಂಘ ಆರಂಭಿಸಲು ಮುಂದಾಗಿದೆ.
ಸರ್ಕಾರಿ ಶಾಲೆಗಳ ಸರ್ವಾಂಗೀಣ ಅಭಿವೃದ್ಧಿಗಾಗಿ ಹಲವಾರು ಯೋಜನೆಗಳನ್ನು ಕೈಗೆತ್ತಿಕೊಂಡಿರುವ ರಾಜ್ಯ ಸರ್ಕಾರ ಈಗ, ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳ ಸಂಘ ಆರಂಭಿಸಲು ಮುಂದಾಗಿದೆ.
ʼನನ್ನ ಶಾಲೆ; ನನ್ನ ಜವಾಬ್ದಾರಿʼ ಎನ್ನುವ ಯೋಜನೆಯನ್ನುಆರಂಭಿಸುವ ಬಗ್ಗೆ ಶಿಕ್ಷಣ ಇಲಾಖೆ ಸುತ್ತೋಲೆಯನ್ನು ಹೊರಡಿಸಲಿದ್ದು, ಈ ಯೋಜನೆಯಲ್ಲಿ ವಿದ್ಯಾರ್ಥಿಗಳು ವ್ಯಾಸಂಗ ಮಾಡಿದ ಸರ್ಕಾರಿ ಶಾಲೆಗಳ ಅಭಿವೃದ್ಧಿಗೆ ಹಿರಿಯ ವಿದ್ಯಾರ್ಥಿಗಳಿಗೆ ಜವಾಬ್ದಾರಿ ನೀಡುವುದಾಗಿದೆ ಎಂದು ಸರ್ಕಾರ ಪ್ರಕಟಣೆ ಹೊರಡಿಸಿದೆ.
ಸರ್ಕಾರಿ ಶಾಲೆಯಲ್ಲಿ ಕಲಿತಿರುವ ಲಕ್ಷಾಂತರ ವಿದ್ಯಾರ್ಥಿಗಳು ಉತ್ತಮ ಉದ್ಯೋಗದಲ್ಲಿದ್ದು, ದೇಶ- ವಿದೇಶದಲ್ಲಿ ನೆಲೆಸಿದ್ದಾರೆ. ಅವರಿಗೆ ತಾವು ಕಲಿತ ಶಾಲೆಗೆ ಏನಾದರೂ ಕೊಡುಗೆ ಕೊಡಬೇಕು ಎನ್ನುವ ಆಸಕ್ತಿಯಿದ್ದರೂ ಯಾವ ರೀತಿ ಸಹಾಯ ಮಾಡಬೇಕು ಎನ್ನುವುದು ಗೊತ್ತಿರುವುದಿಲ್ಲ. ಆದ್ದರಿಂದ ಹಿರಿಯ ವಿದ್ಯಾರ್ಥಿಗಳ ಸಂಘವನ್ನು ಮಾಡಲಾಗುತ್ತಿದೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಹೇಳಿದ್ದಾರೆ.