ಕರೀಂನಗರ: ತೆಲಂಗಾಣದ ಯುವಕನೊಬ್ಬ ಹಳೆಯ ಮೋಟಾರ್ ಸೈಕಲ್ ಅನ್ನು ಎಲೆಕ್ಟ್ರಿಕ್ ಬೈಕ್‌ಗೆ ಅಪ್‌ಗ್ರೇಡ್ ಮಾಡಿ ಸಾಧನೆ ಮಾಡಿದ್ದಾನೆ. ಹೊಸದಾಗಿ ನವೀಕರಿಸಿದ ಎಲೆಕ್ಟ್ರಿಕ್ ಬೈಕು ಐದು ಗಂಟೆಗಳ ಕಾಲ ಚಾರ್ಜ್ ಮಾಡಿದ ನಂತರ 180 ಕಿಮೀ ದೂರವನ್ನು ಕ್ರಮಿಸುತ್ತದೆ.
ಈತನ ಹೆಸರು ಕಾಸಂ ಅಖಿಲ್ ರೆಡ್ಡಿ. ತೆಲಂಗಾಣದ ಕರೀಂನಗರ ಜಿಲ್ಲೆಯ ಮಣಕೊಂಡೂರ್ ಮಂಡಲದ ಮುಂಜಂಪಲ್ಲಿ ಗ್ರಾಮದವ. ಪಂಜಾಬ್‌ನ ಲವ್ಲಿ ಪ್ರೊಫೆಷನಲ್ ಯೂನಿವರ್ಸಿಟಿಯಲ್ಲಿ ಆಟೋಮೊಬೈಲ್ ಇಂಜಿನಿಯರಿಂಗ್‌ನಲ್ಲಿ ಡಿಪ್ಲೊಮಾ (ಪಾಲಿಟೆಕ್ನಿಕ್) ಮುಗಿಸಿರುವ ಈತ, ಇತ್ತೀಚೆಗೆ ಪೆಟ್ರೋಲ್ ಬೆಲೆಯಲ್ಲಿನ ತೀವ್ರ ಏರಿಕೆಯಿಂದ ತಂದೆಗೆ ಆಗುತ್ತಿರುವ ಸಮಸ್ಯೆಯನ್ನು ಗಮನಿಸಿ ಈ ಒಂದು ಸಾಧನೆ ಮಾಡಿದ್ದಾನೆ.
ತಂದೆಯ ಫಾರ್ಮ್ ಬಹಳ ದೂರದಲ್ಲಿ ಇದ್ದ ಹಿನ್ನೆಲೆಯಲ್ಲಿ ಪೆಟ್ರೋಲ್ಗೆ ಪರ್ಯಾಯವಾಗಿ ಯುವಕ ಅದನ್ನು ಪರಿವರ್ತಿಸಿದ್ದಾನೆ. ತಂದೆಯ ಹಳೆಯ ಹೀರೋ ಹೋಂಡಾ ಮೋಟಾರ್ ಬೈಕನ್ನು ಸ್ಪೀಡೋಮೀಟರ್ ಅನ್ನು ಸರಿಪಡಿಸುವ ಮೂಲಕ ಎಲೆಕ್ಟ್ರಿಕ್ ಬೈಕು ಆಗಿ ಮಾರ್ಪಡಿಸಿದ್ದಾನೆ.
ಬೈಕ್ ಗೆ ಈವರೆಗೆ ರೂ. 1.3 ಲಕ್ಷ ಖರ್ಚು ಮಾಡಿದ್ದಾನೆ. ಈ ಬೈಕ್ ಐದು ಗಂಟೆಗಳ ಬ್ಯಾಟರಿ ಚಾರ್ಜ್‌ನೊಂದಿಗೆ 180 ಕಿಮೀ ದೂರವನ್ನು ಮತ್ತು ಐದು ಯೂನಿಟ್ ವಿದ್ಯುತ್ ಬಳಕೆಯೊಂದಿಗೆ ಎಂಟು ಗಂಟೆಗಳ ಚಾರ್ಜ್‌ನೊಂದಿಗೆ ಸುಮಾರು 200 ಕಿಮೀ ದೂರವನ್ನು ಕ್ರಮಿಸುತ್ತದೆ. ಈತನ ಸಾಧನೆಗೆ ಎಲ್ಲೆಡೆಯಿಂದ ಶ್ಲಾಘನೆಗಳ ಮಹಾಪೂರ ಹರಿದುಬರುತ್ತಿದೆ.