ಗಡಿ ವಿವಾದ ಕೆದಕುವ ಸಲುವಾಗಿ ಬೆಳಗಾವಿಗೆ ಬರಲು ಮುಂದಾಗಿದ್ದ ಮಹಾರಾಷ್ಟ್ರ ಸಚಿವ ಚಂದ್ರಕಾಂತ್ ಪಾಟೀಲ್ ಮುಖಕ್ಕೆ ಪುಣೆ ಸಮೀಪದ ಪಿಂಪ್ರಿ ಚಿಂಚವಾಡದಲ್ಲಿ ಶನಿವಾರದಂದು ಮಸಿ ಬಳೆಯಲಾಗಿದೆ. ಮಹಾತ್ಮ ಜ್ಯೋತಿಬಾ ಫುಲೆ, ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಕರ್ಮವೀರ ಭಾವುರಾವ್ ಪಾಟೀಲ್ ಅವರ ಕುರಿತು ಆಕ್ಷೇಪಾರ್ಹ ಹೇಳಿಕೆ ನೀಡಿದ್ದ ಹಿನ್ನೆಲೆಯಲ್ಲಿ ವ್ಯಕ್ತಿಯೊಬ್ಬರು ಚಂದ್ರಕಾಂತ ಪಾಟೀಲ್ ಮುಖಕ್ಕೆ ಮಸಿ ಎರೆಚಿದ್ದಾರೆ.
ಈ ಹಿಂದೆ ಔರಂಗಬಾದ್ ನಲ್ಲಿ ನಡೆದ ಕಾರ್ಯಕ್ರಮ ಒಂದರಲ್ಲಿ ಭಾಗಿಯಾಗಿದ್ದ ವೇಳೆ ಮಹಾರಾಷ್ಟ್ರದ ಉನ್ನತ ಮತ್ತು ತಾಂತ್ರಿಕ ಶಿಕ್ಷಣ ಸಚಿವರಾಗಿರುವ ಚಂದ್ರಕಾಂತ್ ಪಾಟೀಲ್, ಈ ಮೂವರು ಮಹಾನ್ ವ್ಯಕ್ತಿಗಳ ಕುರಿತು ಆಕ್ಷೇಪಾರ್ಹ ಮಾತುಗಳನ್ನು ಆಡಿದ್ದರು. ಈ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿದ್ದ ವ್ಯಕ್ತಿಯೊಬ್ಬರು ಸಚಿವ ಚಂದ್ರಕಾಂತ್ ಪಾಟೀಲ್ ಪಿಂಪ್ರಿ ಚಿಂಚವಾಡಿಗೆ ಬಂದ ವೇಳೆ ಮಸಿ ಎರಚಿದ್ದಾರೆ.
ಕೂಡಲೇ ಭದ್ರತಾ ಸಿಬ್ಬಂದಿ ಮಸಿ ಎರಚಿದ ವ್ಯಕ್ತಿಯನ್ನು ವಶಕ್ಕೆ ಪಡೆದಿದ್ದು, ಸಚಿವ ಚಂದ್ರಕಾಂತ್ ಪಾಟೀಲ್ ಅವರನ್ನು ಸುರಕ್ಷಿತವಾಗಿ ಕರೆದೊಯ್ಯಲಾಯಿತು. ಚಂದ್ರಕಾಂತ್ ಪಾಟೀಲ್ ಅವರ ಹೇಳಿಕೆ ಕುರಿತಂತೆ ಪ್ರತಿಕ್ರಿಯಿಸಿರುವ ಮಹಾರಾಷ್ಟ್ರ ಉಪ ಮುಖ್ಯಮಂತ್ರಿ ದೇವೇಂದ್ರ ಪಡ್ನವೀಸ್, ಸಚಿವ ಚಂದ್ರಕಾಂತ್ ಪಾಟೀಲ್ ಅವರ ಹೇಳಿಕೆಯನ್ನು ಜನರು ತಪ್ಪಾಗಿ ಅರ್ಥೈಸಿಕೊಂಡಿದ್ದಾರೆ ಎಂದು ಸಮಜಾಯಿಷಿ ನೀಡಿದ್ದಾರೆ.