ತುಮಕೂರು : ದೊಡ್ಡಮ್ಮನಿಗೆ ಅಮ್ಮನಷ್ಟೇ ಪ್ರಾಶಸ್ತ್ಯ.. ಅಮ್ಮನ ಹತ್ತಿರ ಹೇಳಿಕೊಳ್ಳದ ಕೆಲವು ವಿಷಯಗಳನ್ನು ದೊಡ್ಡಮ್ಮನ ಬಳಿ ಹೇಳಿಕೊಳ್ಳುತ್ತಾರೆ…ಆದರೆ ತುಮಕೂರಿನಲ್ಲಿ ನಡೆದ ಅಮಾನವೀಯ ಘಟನೆ ನಿಜಕ್ಕೂ ಬೇಸರ ತರಿಸುವಂತಿದೆ.
ತಾಯಿ ಇಲ್ಲದೇ ಅನಾಥೆಯಾಗಿದ್ದ ಬಾಲಕಿಯೊಬ್ಬಳು ದೊಡ್ಡಮ್ಮನ ಚಿತ್ರಹಿಂಸೆಗೆ ಒಳಗಾದ ಅಮಾನವೀಯ ಘಟನೆ ತುಮಕೂರಿನಲ್ಲಿ ನಡೆದಿದೆ. ಹಣಕ್ಕಾಗಿ ಬಾಲಕಿಯ ತೊಡೆಯನ್ನು ಇಸ್ತ್ರಿಪೆಟ್ಟಿಗೆಯಿಂದ ಸುಟ್ಟು ಚಿತ್ರಹಿಂಸೆ ನೀಡಿದ್ದಾಳೆ. ಶಿರಾ ತಾಲೂಕಿನ ನಿಡಘಟ್ಟೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ನಂಜಮ್ಮ ಎಂಬ ಮಹಿಳೆ ಬಾಲಕಿಗೆ ಚಿತ್ರಹಿಂಸೆ ನೀಡಿದ್ದಾಳೆ. ಇದಕ್ಕೆ ನಂಜಮ್ಮನ ಮಗ ಕೂಡ ಸಾಥ್ ನೀಡಿದ್ದಾನೆ.
ಲಕ್ಷ್ಮಿ ಎಂಬ ಬಾಲಕಿಯ ತಾಯಿ ಕೆಲವು ವರ್ಷಗಳ ಹಿಂದೆ ಮೃತಪಟ್ಟಿದ್ದರು. ತಂದೆ ಇದ್ದಾರೆ. ತನ್ನ ಮಗಳಿಗಾಗಿ ತಾಯಿ 4 ಲಕ್ಷ ಹಣ ಡಿಪಾಸಿಟ್ ಮಾಡಿದ್ದರು. ಈ ಹಣವನ್ನು ಲಪಟಾಯಿಸಲು ಬಾಲಕಿಗೆ ದೊಡ್ಡಮ್ಮ ಚಿತ್ರಹಿಂಸೆ ನೀಡಿದ್ದಾಳೆ. ಹಣವನ್ನು ಬಿಡಿಸಿ ಕೊಡು ಎಂದು ಚೆಕ್ ಗೆ ಸಹಿ ಹಾಕಲು ಒತ್ತಾಯಿಸಿದ್ದಾರೆ. ಇದಕ್ಕೆ ಬಾಲಕಿ ಒಪ್ಪದೇ ಇದ್ದಾಗ ಬಿಸಿ ಇಸ್ತ್ರಿ ಪೆಟ್ಟಿಗೆ ಇಟ್ಟು ಚಿತ್ರಹಿಂಸೆ ನೀಡಿದ್ದಾರೆ. ಕೆಲವು ದಿನಗಳ ನಂತರ ತಡವಾಗಿ ಘಟನೆ ಬೆಳಕಿಗೆ ಬಂದಿದೆ. ಬಡವನಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ಕೂಡ ದಾಖಲಿಸಲಾಗಿದೆ.ಬಾಲಕಿ ಲಕ್ಷ್ಮೀ ಐದನೇ ತರಗತಿ ಓದುತ್ತಿದ್ದು, ಆಕೆ ಸೋಮವಾರ ಪರೀಕ್ಷೆಗೆ ಹಾಜರಾಗದ ಹಿನ್ನೆಲೆ ಘಟನೆ ಬೆಳಕಿಗೆ ಬಂದಿದೆ.