ಕೋವಿಡ್ ಕಾರಣಕ್ಕೆ ಜಾರಿಗೆ ಬಂದ ವರ್ಕ್ ಫ್ರಮ್ ಹೋಂ ಸಂಸ್ಕೃತಿಯನ್ನು ಕೊನೆಗೊಳಿಸಿ ಸಿಬ್ಬಂದಿಯನ್ನು ಕಚೇರಿಗೆ ಹಿಂದಿರುಗಿ ಕರೆಸಿಕೊಳ್ಳುವ ಐಟಿ ಕಂಪನಿಗಳ ಪ್ರಯತ್ನಗಳು ಫಲಕೊಟ್ಟಿಲ್ಲ.
ಕೋವಿಡ್ ಸಾಂಕ್ರಾಮಿಕವು ಕೊನೆಗೊಂಡಿಲ್ಲ. ಭಾರತದಲ್ಲಿ ಪ್ರಕರಣಗಳು ಹೆಚ್ಚುತ್ತಲೇ ಇದೆ. ಈ ನಡುವೆ ಮಾಹಿತಿ ತಂತ್ರಜ್ಞಾನ ಸಂಸ್ಥೆಗಳಾದ ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ (ಟಿಸಿಎಸ್) ಮತ್ತು ಇನ್ಫೋಸಿಸ್ ತಮ್ಮ ಹೈಬ್ರಿಡ್ ಮಾದರಿಯ ಕಾರ್ಯಾಚರಣೆಗೆ ಅಂಟಿಕೊಳ್ಳುತ್ತಿವೆ. ಇತರ ಐಟಿ ಸಂಸ್ಥೆಗಳೂ ಇದೇ ವ್ಯವಸ್ಥೆಯನ್ನು ಅಳವಡಿಸಿಕೊಳ್ಳುತ್ತಿವೆ.
ಕೆಲವು ಕಂಪನಿಗಳು ಇತ್ತೀಚೆಗೆ ತಮ್ಮ ಕಚೇರಿಗಳನ್ನು ಪುನಃ ತೆರೆದವು ಮತ್ತು ತಮ್ಮ ಸಿಬ್ಬಂದಿಯನ್ನು ಕೆಲಸಕ್ಕೆ ಮರಳಿ ಬರಬೇಕೆಂದು ಆಹ್ವಾನ ನೀಡಿದ್ದವು. ಆದರೆ, ಕೋವಿಡ್ ಪ್ರಕರಣ ಹೆಚ್ಚಿದ್ದರಿಂದ ವರ್ಕ್ ಫ್ರಮ್ ಹೋಂ ಸದ್ಯಕ್ಕೆ ಸೂಕ್ತ ಎಂದು ತೀರ್ಮಾನಕ್ಕೆ ಬರಲಾಯಿತು.
ಯುಎಸ್ ಮೂಲದ ಐಟಿ ದೈತ್ಯ ಸಿನೊಪ್ಸಿಸ್‌ನ ನೋಯ್ಡ ಘಟಕವು ವರ್ಕ್ ಫ್ರಂ ಹೋಂಗೆ ಸೂಚನೆ ನೀಡುವ ಮೊದಲು ತನ್ನ ಉದ್ಯೋಗಿಗಳನ್ನು ಕಚೇರಿಗಳಿಗೆ ಕರೆಸಿತ್ತು. ಪೇಟಿಎಂ ಇತ್ತೀಚೆಗೆ ತನ್ನ ಸಿಬ್ಬಂದಿಗೆ ಮನೆಯಿಂದಲೇ ಕೆಲಸ ಮಾಡಲು ಅನುಮತಿ ನೀಡಿದೆ. ಪೆಟಿಎಂ ಸಿಇಒ ವಿಜಯ್ ಶೇಖರ್ ಶರ್ಮಾ ಇತ್ತೀಚೆಗೆ ಟ್ವೀಟ್ ಮಾಡಿ, ಮನೆಯಿಂದ ಅಥವಾ ಎಲ್ಲಿಂದಾದರೂ ಕೆಲಸ ಮಾಡಲು ನಿಮಗೆ ಅವಕಾಶ ನೀಡುತ್ತೇವೆ ಎಂದಿದ್ದರು.
ಟಿಸಿಎಸ್ ಮತ್ತು ಇನ್ಫೋಸಿಸ್ ಭಾರತದ ಎರಡು ದೊಡ್ಡ ಐಟಿ ಸಂಸ್ಥೆಗಳು, ದೀರ್ಘಾವಧಿಯಲ್ಲಿ ಹೈಬ್ರಿಡ್ ವಿಧಾನಕ್ಕೆ ಒಗ್ಗಿಕೊಳ್ಳುವುದಾಗಿ ಘೋಷಿಸಿವೆ. ಸದ್ಯ ಸಿಇಒ, ಹಿರಿಯ ಅಧಿಕಾರಿಗಳು, ಮಾತ್ರ ಕಚೇರಿಯಲ್ಲಿ ಹಾಜರಿರುತ್ತಾರೆ.
ಟಾಟಾ ಕನ್ಸಲ್ಟೆನ್ಸಿ ಸರ್ವಿಸಸ್ ತನ್ನ ಸಹೋದ್ಯೋಗಿಗಳಿಗೆ ಯಾವುದೇ ಸ್ಥಳದಿಂದ ಅಥವಾ ಹಾಟ್ ಡೆಸ್ಕ್‌ಗಳಲ್ಲಿ ಕೆಲಸ ಮಾಡಲು ವರ್ಕ್ ಸ್ಟೇಷನ್‌ಗಳನ್ನು ಸ್ಥಾಪಿಸಿದೆ.