
ಬೆಂಗಳೂರು: ಮೊರಾರ್ಜಿ ದೇಸಾಯಿ ವಸತಿ ಶಾಲೆ ಸೇರಿದಂತೆ ವಿವಿಧ ಮಾದರಿಯ ವಸತಿ ಶಾಲೆಗಳ ಪ್ರವೇಶಕ್ಕೆ 2024ರ ಫೆಬ್ರವರಿ 18ರಂದು ಪ್ರವೇಶ ಪರೀಕ್ಷೆ ನಡೆಯಲಿದೆ. ಅರ್ಜಿ ಸಲ್ಲಿಸಲು ಡಿಸೆಂಬರ್ 31 ಕೊನೆಯ ದಿನವಾಗಿದ್ದು, ಅಗತ್ಯ ದಾಖಲಾತಿಗಳೊಂದಿಗೆ ಸಮೀಪದ ವಸತಿ ಶಾಲೆಗಳಲ್ಲಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ.
ರಾಜ್ಯಾದ್ಯಂತ ಏಕಕಾಲದಲ್ಲಿ ಪ್ರವೇಶ ಪರೀಕ್ಷೆ ನಡೆಯಲಿದ್ದು, ವಿದ್ಯಾರ್ಥಿಗಳು ಗಳಿಸುವ ಅಂಕಗಳ ಮೆರಿಟ್ ಆಧಾರದ ಮೇಲೆ ಪಟ್ಟಿ ಸಿದ್ಧಪಡಿಸಿ ಅನ್ವಯವಾಗುವ ಮೀಸಲು ಹಾಗೂ ಅಭ್ಯರ್ಥಿಗಳು ಪ್ರವೇಶಕ್ಕೆ ನಮೂದಿಸಿದ ಶಾಲೆಗಳ ಆದ್ಯತಾ ಕ್ರಮದ ಆಧಾರದ ಮೇಲೆ ಆಯಾ ಜಿಲ್ಲಾ ವ್ಯಾಪ್ತಿ ಶಾಲೆಗಳಿಗೆ ಸೀಟು ಹಂಚಿಕೆ ನಡೆಯಲಿದೆ ಎಂದು ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘ ತಿಳಿಸಿದೆ.
ಶಿಕ್ಷಣ ಇಲಾಖೆಯಿಂದ ವರ್ಗಾವಣೆಗೊಂಡ 24 ವಸತಿ ಶಾಲೆಗಳಿದ್ದು, 50 ಸೀಟುಗಳಂತೆ 1200 ಸೀಟುಗಳು ಲಭ್ಯವಿದೆ. ಏಕಲವ್ಯ ಮಾದರಿ ಶಾಲೆಗಳಲ್ಲಿ ಪರಿಶಿಷ್ಟ ಪಂಗಡದ ಅಭ್ಯರ್ಥಿಗಳಿಗೆ ಶೇಕಡ 90ರಷ್ಟು ಪ್ರವೇಶಾವಕಾಶ ಇದೆ. ಅಲೆಮಾರಿ ವಸತಿ ಶಾಲೆಗೆ ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಿಂದ ಘೋಷಿಸಿದ ಅಲೆಮಾರಿ ವರ್ಗದ ಅಭ್ಯರ್ಥಿಗಳಿಗೆ ಶೇಕಡ 100ರಷ್ಟು ಪ್ರವೇಶ ಅವಕಾಶವಿದ್ದು, ವಸತಿ ಶಾಲೆಗಳಿಗೆ ಆರನೇ ತರಗತಿಗೆ ಪ್ರವೇಶ ನೀಡಲಾಗುವುದು.