ಕೊರೊನಾ ಮೂರನೇ ಅಲೆ ಮಕ್ಕಳನ್ನು ಹೆಚ್ಚು ಕಾಡಲಿದೆ ಎಂಬ ಆತಂಕ ಎಲ್ಲರನ್ನೂ ಮನೆ ಮಾಡಿದೆ. ಈಗಾಗಲೇ ಕೊರೊನಾ ಮಕ್ಕಳನ್ನು ಆವರಿಸುತ್ತಿದೆ ಎಂಬ ಸುದ್ದಿ ಪಾಲಕರನ್ನು ಭಯಗೊಳಿಸಿದೆ. ಈ ಎಲ್ಲದರ ಮಧ್ಯೆ ಮಕ್ಕಳಿಗೆ ಇನ್ಫ್ಲುಯೆನ್ಜ ಇಂಜೆಕ್ಷನ್ ಹಾಕಿಸುವಂತೆ ವೈದ್ಯರು ಸಲಹೆ ನೀಡ್ತಿದ್ದಾರೆ.
ಇನ್ಫ್ಲುಯೆನ್ಜ ವನ್ನು ಫ್ಲೂ ಎಂದು ಕರೆಯಲಾಗುತ್ತದೆ. ಜ್ವರ, ಸೋರುವ ಮೂಗು, ಕಟ್ಟಿದ ಮೂಗು, ಕೆಮ್ಮು, ಶೀತದ ಲಕ್ಷಣ ಹೆಚ್ಚಾದಾಗ ಅದನ್ನು ಫ್ಲೂ ಎಂದು ಕರೆಯಲಾಗುತ್ತದೆ. ಇದು ಸಾಂಕ್ರಾಮಿಕ ಸೋಂಕಾಗಿದ್ದು, ಮಕ್ಕಳ ಶ್ವಾಸಕೋಶದ ಮೇಲೆ ಪರಿಣಾಮ ಬೀರಬಹುದು. ಸಾಮಾನ್ಯವಾಗಿ ಕಾಡುವ ಉಸಿರಾಟದ ಕಾಯಿಲೆಗಳಲ್ಲಿ ಒಂದಾಗಿದೆ.
ಜಾನ್ ಹಾಪ್ಕಿನ್ಸ್ ನಡೆಸಿದ ಸಂಶೋಧನೆಯ ಪ್ರಕಾರ, ಇದಕ್ಕೆ ತುತ್ತಾದ ಮಕ್ಕಳು ಒಂದು ವಾರದೊಳಗೆ ಚೇತರಿಸಿಕೊಂಡಿದ್ದಾರೆ. ಕೆಲವೇ ಕೆಲವು ಮಕ್ಕಳು ಮಾತ್ರ ಗಂಭೀರ ಸ್ಥಿತಿ ತಲುಪುವ ಸಾಧ್ಯತೆಯಿದೆ. ಭಾರತದಲ್ಲಿ ಪ್ರತಿ ವರ್ಷ 5 ವರ್ಷಕ್ಕಿಂತ ಕಡಿಮೆ ವಯಸ್ಸಿನ 1 ಲಕ್ಷಕ್ಕೂ ಹೆಚ್ಚು ಮಕ್ಕಳು ಇನ್ಫ್ಲುಯೆನ್ಜ್ ಜ್ವರದಿಂದ ಆಸ್ಪತ್ರೆಗೆ ದಾಖಲಾಗುತ್ತಾರೆ ಎಂದು ಅಧ್ಯಯನಗಳು ಹೇಳಿವೆ.
ಫ್ಲೂ ಸಾಮಾನ್ಯವಾಗಿ 6 ತಿಂಗಳಿಂದ 5 ವರ್ಷ ವಯಸ್ಸಿನ ಮಕ್ಕಳು, ಗರ್ಭಿಣಿಯರು, 65 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನ ವೃದ್ಧರು, ಆರೋಗ್ಯ ಕಾರ್ಯಕರ್ತರು ಮತ್ತು ಮಧುಮೇಹ, ಆಸ್ತಮಾ, ಕ್ಯಾನ್ಸರ್ ಮುಂತಾದ ಕಾಯಿಲೆಗಳನ್ನು ಹೊಂದಿರುವ ವ್ಯಕ್ತಿಗಳಿಗೆ ಹೆಚ್ಚಿನ ಆರೈಕೆ ಅಗತ್ಯವಿದೆ. ಆಂಟಿವೈರಲ್ ಔಷಧಿಯಿಂದ ರೋಗವನ್ನು ತಡೆಗಟ್ಟಬಹುದು.
ಇನ್ಫ್ಲುಯೆನ್ಜ ಇಂಜೆಕ್ಷನ್ ಈ ಜ್ವರ ನಿಯಂತ್ರಣಕ್ಕೆ ಹೆಚ್ಚು ಪರಿಣಾಮಕಾರಿ. ಜಾಗತಿಕ ಮತ್ತು ಭಾರತೀಯ ಆರೋಗ್ಯ ಅಧಿಕಾರಿಗಳು 6 ತಿಂಗಳಿಂದ 5 ವರ್ಷ ವಯಸ್ಸಿನ ಮಕ್ಕಳಿಗೆ ವಾರ್ಷಿಕ ಇನ್ಫ್ಲುಯೆನ್ಸ ಲಸಿಕೆ ನೀಡಲು ಶಿಫಾರಸು ಮಾಡುತ್ತಾರೆ. ಇನ್ಫ್ಲುಯೆನ್ಜ ವೈರಸ್ ವಿರುದ್ಧ ರೋಗನಿರೋಧಕ ಶಕ್ತಿ ಕಡಿಮೆಯಾಗುತ್ತದೆ. ಹಾಗೆ ವೈರಸ್ ತಳಿ ಪ್ರತಿವರ್ಷ ಬದಲಾಗುತ್ತದೆ. ಹಾಗಾಗಿ ಪ್ರತಿ ವರ್ಷ ವ್ಯಾಕ್ಸಿನೇಷನ್ ಮಾಡಬೇಕು. ಪ್ರತಿವರ್ಷ ಇನ್ಫ್ಲುಯೆನ್ಸ ವಿರುದ್ಧ ಲಸಿಕೆ ಪಡೆಯುವುದು ಮಗುವಿನ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಕೊರೊನಾ ತಡೆಯಲು ನೆರವಾಗಬಹುದು ಎನ್ನಲಾಗ್ತಿದೆ. ಯಾವುದೇ ಇಂಜೆಕ್ಷನ್ ನೀಡುವ ಮೊದಲು ವೈದ್ಯರಿಂದ ಸರಿಯಾದ ಮಾಹಿತಿ ಪಡೆಯುವುದು ಉತ್ತಮ.