ಕರ್ನಾಟಕದಲ್ಲಿ ಕನ್ನಡ ಭಾಷೆಗೆ ಪ್ರಥಮ ಸ್ಥಾನ. ಕಂಪನಿಗಳು ಸೇರಿದಂತೆ ವಾಣಿಜ್ಯ ಅಂಗಡಿಗಳು, ಮಾಲ್ ಹಾಗು ಇತರೆಡೆ ನಾಮಫಲಕಗಳಲ್ಲಿ ಶೇ.60 ರಷ್ಟು ಕನ್ನಡ ಕಡ್ಡಾಯವೆಂದು ರಾಜ್ಯ ಸರ್ಕಾರ ಹೇಳಿದೆ. ಇದನ್ನು ಪಾಲಿಸದ ಕಂಪನಿ, ಅಂಗಡಿ ಮುಂಗಟ್ಟುಗಳ ವಿರುದ್ಧ ಹೋರಾಟಕ್ಕಿಳಿದಿರುವ ಕರ್ನಾಟಕ ರಕ್ಷಣಾ ವೇದಿಕೆ ಕಾರ್ಯಕರ್ತರು
ಡಿಸೆಂಬರ್ 27 ರಂದು ಬೆಂಗಳೂರಲ್ಲಿ ಪ್ರತಿಭಟನೆ ನಡೆಸಿದ್ದರು. ಕನ್ನಡಕ್ಕೆ ಆದ್ಯತೆ ನೀಡಬೇಕು. ನಾಮಫಲಕಗಳಲ್ಲಿ ಶೇಕಡಾ 60 ರಷ್ಟು ಕನ್ನಡ ಭಾಷೆ ಕಡ್ಡಾಯವಾಗಿ ಬಳಕೆ ಮಾಡಬೇಕೆಂದು ವಾದಿಸಿದರು. ಈ ಹೋರಾಟ ರಾಷ್ಟ್ರ ಮಟ್ಟದಲ್ಲಿ ಗಮನ ಸೆಳೆದು ಸುದ್ದಿಯಾಗಿದ್ದಲ್ಲದೇ, ಹಲವು ಮೀಮ್ಸ್ ರಚನೆಗೂ ಕಾರಣವಾಗಿದೆ. ಹಲವು ಮೀಮ್ಸ್ ಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿವೆ.
ಬಿಹಾರದ ಸಾಮಾಜಿಕ ಮಾಧ್ಯಮ ಪ್ರಭಾವಿ ಉಪಾಸನಾ ಮಿಶ್ರಾ ಬಿಹಾರದಲ್ಲಿ ಹೂಡಿಕೆ ಮಾಡಲು ಕರ್ನಾಟಕದ ಕಂಪನಿಗಳಿಗೆ ಆಹ್ವಾನ ನೀಡಿದ್ದಾರೆ. ಬಿಹಾರದಲ್ಲಿ ಕಂಪನಿಗಳಿಗೆ ಬೆಂಬಲ ಮತ್ತು ವಿಶಾಲ ಮನಸ್ಸಿನ ವಾತಾವರಣ ನಿರ್ಮಿಸಿ ಕೊಡುವ ಭರವಸೆ ನೀಡಿದ್ದಾರೆ. ಅವರ ಪೋಸ್ಟ್ ತ್ವರಿತವಾಗಿ ವೈರಲ್ ಆಗಿದ್ದು, ಸಾಕಷ್ಟು ಮೀಮ್‌ಗಳು ಮತ್ತು ಚರ್ಚೆಗಳಿಗೆ ಕಾರಣವಾಗಿದೆ.
“ಇಡೀ ಬಿಹಾರದ ಪರವಾಗಿ ನಾನು ಕರ್ನಾಟಕದ ಎಲ್ಲಾ ಕಂಪನಿಗಳಿಗೆ ಆಹ್ವಾನಿಸುತ್ತಿದ್ದೇನೆ. ಬನ್ನಿ ಬಿಹಾರದಲ್ಲಿ ಹೂಡಿಕೆ ಮಾಡಿ. ನಿಮ್ಮ ಕಂಪನಿ ಸ್ಥಾಪನೆಗೆ ನಾವು ಎಲ್ಲವನ್ನೂ ಸಹಾಯ ಮಾಡುತ್ತೇವೆ. ಬಿಹಾರ ವಿಶಾಲ ಮನೋಭಾವದ ರಾಜ್ಯವಾಗಿದೆ ಮತ್ತು ನಾವು ನಿಮ್ಮೆಲ್ಲರನ್ನು ಸ್ವಾಗತಿಸುತ್ತೇವೆ. ಜೈ ಬಿಹಾರ. ಜೈ ಹಿಂದ್” ಎಂದು ಬರೆದಿದ್ದಾರೆ.
ಈ ಪೋಸ್ಟ್ ವೈರಲ್ ಆಗ್ತಿದ್ದಂತೆ ಕೆಲವರು ಬಿಹಾರದ ಮೂಲಸೌಕರ್ಯ ಸವಾಲುಗಳ ಬಗ್ಗೆ ಹಾಸ್ಯ ಮಾಡಿದ್ದರೆ, ಇತರರು ರಾಜ್ಯದಲ್ಲಿ ಹೂಡಿಕೆಯ ಕರೆಯನ್ನು ಶ್ಲಾಘಿಸಿದರು. ಈ ವಿಚಾರಕ್ಕೆ ಸಂಬಂಧಿಸಿದಂತೆ ಮೀಮ್ಸ್ ಗಳು ಟ್ವಿಟರ್ ನಲ್ಲಿ ಹರಿದಾಡ್ತಿದ್ದು , ಟ್ರೆಂಡಿಂಗ್ ಪಟ್ಟಿಯಲ್ಲಿ ‘ಬಿಹಾರಿಗಳು’ ಅಗ್ರ ಸ್ಥಾನದಲ್ಲಿತ್ತು.