ಸೆಂಚುರಿ ಬಾರಿಸಿ, ಕೆಳಗೆ ಇಳಿಯದೆ ಇರುವ ಪೆಟ್ರೋಲ್ ದರ ಮತ್ತು ಸಾವಿರದ ಗಡಿಯಲ್ಲಿರುವ ಸಬ್ಸಿಡಿ ರಹಿತ ಅಡುಗೆ ಅನಿಲ ಎಲ್ಪಿಜಿ ಸಿಲಿಂಡರ್ ಬೆಲೆಗಳಿಂದ ಜನಸಾಮಾನ್ಯರು ಕಂಗಾಲಾಗಿದ್ದಾರೆ. ನಿತ್ಯ ಜೀವನ ನಡೆಸುವುದು ಕೂಡ ಕಷ್ಟವಾಗಿದೆ. ತಿಂಗಳ ದುಡಿಮೆಯಲ್ಲಿ ಮುಕ್ಕಾಲು ಪಾಲು ಪೆಟ್ರೋಲ್, ಎಲ್ಪಿಜಿ, ದುಬಾರಿ ದಿನಸಿ ಪದಾರ್ಥಗಳಿಗೆ ವ್ಯಯವಾಗುತ್ತಿದೆ. ಕೊರೊನಾ ಸಂಕಷ್ಟದ ನೆಪದಲ್ಲಿ ಹೇರುತ್ತಿರುವ ದೊಡ್ಡ ಮೊತ್ತದ ತೆರಿಗೆಯೇ ಇದಕ್ಕೆ ಪ್ರಮುಖ ಕಾರಣ.
ಇದರ ನಡುವೆಯೇ ಆಟೋ ಗ್ಯಾಸ್ ಅಥವಾ ಸಿಎನ್ಜಿ ಹಾಗೂ ಪೈಪ್ಡ್ ಕುಕ್ಕಿಂಗ್ ಗ್ಯಾಸ್ಗಳ ದರವನ್ನು ಕೂಡ ಶೇ.10-11ರಷ್ಟು ಏರಿಕೆ ಮಾಡಲು ಸರ್ಕಾರಿ ಸ್ವಾಮ್ಯದ ಕಂಪನಿಗಳು ಮುಂದಾಗಿವೆ ಎಂದು ವರದಿಯೊಂದು ಸೂಚನೆ ನೀಡಿದೆ. ಅಕ್ಟೋಬರ್ 1ರಂದು ಸರ್ಕಾರಿ ಸ್ವಾಮ್ಯದ ಒಎನ್ಜಿಸಿ ಕಂಪನಿಯು ದರ ಪರಿಷ್ಕರಣೆ ಮಾಡಲಿದೆ. ಈ ವೇಳೆ ಸಿಎನ್ಜಿ ದರವು ಜನಸಾಮಾನ್ಯರ ಜೇಬಿಗೆ ದೊಡ್ಡ ಕತ್ತರಿ ಹಾಕುವುದು ನಿಶ್ಚಿತ ಎನ್ನಲಾಗುತ್ತಿದೆ.
ಪ್ರಮುಖವಾಗಿ ದೆಹಲಿಯಲ್ಲಿ ಸಿಎನ್ಜಿ ಆಧಾರಿತ ಆಟೋ, ಟ್ಯಾಕ್ಸಿಗಳು ದೊಡ್ಡ ಸಂಖ್ಯೆಯಲ್ಲಿವೆ. ದಿನಬಳಕೆ ಕಾರುಗಳಿಗೆ ಕೂಡ ಜನರು ಸಿಎನ್ಜಿ ಹೆಚ್ಚಾಗಿ ಉಪಯೋಗಿಸುತ್ತಾರೆ. ಇಲ್ಲಿನ ಬಹುತೇಕ ಮನೆಗಳಿಗೆ ಪೈಪ್ಡ್ ಗ್ಯಾಸ್ ಕನೆಕ್ಷನ್ ಇದೆ. ಹಾಗಾಗಿ ದೆಹಲಿ, ಇನ್ಮುಂದೆ ‘ದುಬಾರಿ ದೆಹಲಿ’ ಆಗಲಿದೆ.
ಒಎನ್ಜಿಸಿ, ರಿಲಯನ್ಸ್ ಇಂಡಸ್ಟ್ರೀಸ್ ಲಿಮಿಟೆಡ್, ಆಯಿಲ್ ಇಂಡಿಯಾ ಲಿಮಿಟೆಡ್ ಕಂಪನಿಗಳು ಸಿಎನ್ಜಿ ಮತ್ತು ಪೈಪ್ಡ್ ಗ್ಯಾಸ್ ಪೂರೈಕೆಯಲ್ಲಿ ಪ್ರಮುಖ ಪಾತ್ರ ವಹಿಸಿವೆ. ಬೆಲೆ ಏರಿಕೆಯಿಂದಾಗಿ ಈ ಕಂಪನಿಗಳು ಹೆಚ್ಚಿನ ಲಾಭ ಗಳಿಸಲಿವೆ ಎಂದು ಐಸಿಐಸಿಐ ಸೆಕ್ಯೂರಿಟೀಸ್ ವರದಿ ತಿಳಿಸಿದೆ.