ಶ್ರೀಲಂಕಾದಲ್ಲಿ ಆರ್ಥಿಕ ಮುಗ್ಗಟ್ಟು ಹೆಚ್ಚಾಗಿದ್ದು, ಅಲ್ಲಿ ಹಣದುಬ್ಬರ ಗರಿಷ್ಠ ಶೇ. 11.1ಕ್ಕೆ ತಲುಪಿದೆ. ಹೀಗಾಗಿ ಅಲ್ಲಿನ ದಿನಬಳಕೆಯ ವಸ್ತುಗಳ ದರದಲ್ಲಿ ಕೂಡ ಗಣನೀಯ ಏರಿಕೆಯಾಗುತ್ತಿದೆ.
ಹೀಗಾಗಿ ಶ್ರೀಲಂಕಾ ರಾಷ್ಟ್ರವು ದಿವಾಳಿತನದ ಅಂಚಿಗೆ ಬಂದು ನಿಂತಿದ್ದು, ಅಲ್ಲಿನ ಜನ ಸಂಕಷ್ಟ ಅನುಭವಿಸುವಂತಾಗಿದೆ. ಈ ಕುರಿತು ಅಲ್ಲಿನ ಅಡ್ವೊಕಾಟಾ ಇನ್ಸ್ಟಿಟ್ಯೂಟ್ ಅಂಕಿ ಅಂಶ ಬಿಡುಗಡೆ ಮಾಡಿದ್ದು, ಕಳೆದ ಒಂದು ತಿಂಗಳಲ್ಲಿ ಅಲ್ಲಿ ಅಗತ್ಯ ವಸ್ತುಗಳ ಬೆಲೆ ಆಕಾಶದೆತ್ತರಕ್ಕೆ ಹೋಗಿದೆ.
ಇತ್ತೀಚೆಗಷ್ಟೇ ಶ್ರೀಲಂಕಾ ರಾಷ್ಟ್ರವು ಆರ್ಥಿಕ ತುರ್ತು ಪರಿಸ್ಥಿತಿ ಘೋಷಿಸಿದ್ದು, ವಿವಿಧ ರಾಷ್ಟ್ರಗಳಿಂದ ಪಡೆದಿದ್ದ ಸಾಲ ತೀರಿಸಲು ಹೆಣಗಾಡುತ್ತಿದೆ. ಇದರ ಹೊಡೆತ ನೇರವಾಗಿ ಜನರಿಗೆ ತೊಂದರೆಯಾಗುವಂತೆ ಮಾಡುತ್ತಿದೆ.
ಅಲ್ಲಿ ನವೆಂಬರ್ ಹಾಗೂ ಡಿಸೆಂಬರ್ ವೇಳೆಗೆ ಶೇ. 15ರಷ್ಟು ಹಣದುಬ್ಬರ ಸೃಷ್ಟಿಯಾಗಿದೆ. ಕೊಲಂಬೊ ಗೆಜೆಟ್ ವರದಿಯಂತೆ, ಒಂದು ದಶಕದಲ್ಲಿ ಶ್ರೀಲಂಕಾ ದುಪ್ಪಟ್ಟು ಪ್ರಮಾಣದಲ್ಲಿ ನಷ್ಟ ಅನುಭವಿಸಿದೆ. ಶ್ರೀಲಂಕಾದ ಮೇಲೆ ವಿದೇಶಿ ಸಾಲದ ಮಟ್ಟ ಕೂಡ ಏರಿಕೆಯಾಗುತ್ತಿದ್ದು, ವ್ಯಾಪಾರ ಕೊರತೆ ಹಾಗೂ ವಿತ್ತೀಯ ಕೊರತೆ ಹೆಚ್ಚಾಗಿದೆ.
ಶ್ರೀಲಂಕಾದ 2019ರ ಒಟ್ಟಾರೆ ಜಿಡಿಪಿಯು ಶೇ. 42.6ರಷ್ಟಾಗಿದೆ. ಹೀಗಾಗಿ ಅಲ್ಲಿ ಅಗತ್ಯ ವಸ್ತುಗಳ ಬೆಲೆ ಕೆಜಿಗೆ ಶೇ. 40 ರಿಂದ 60ರಷ್ಟು ಏರಿಕೆ ಕಂಡಿದೆ. ಕೊರೊನಾದಿಂದಾಗಿ ಈ ಪರಿಸ್ಥಿತಿ ಮತ್ತಷ್ಟು ಬಿಗಡಾಯಿಸುತ್ತಿದ್ದು, ಆಹಾರದ ಕೊರತೆಯು ಕೂಡ ಅಲ್ಲಿ ಹೆಚ್ಚಾಗುತ್ತಿದೆ.
ಒಂದು ಕೆಜಿ ಮೆಣಸಿನಕಾಯಿಯ ಬೆಲೆ 710ರೂ.ಗೆ ಏರಿಕೆಯಾಗಿದೆ. ಹಾಲಿನ ಪುಡಿ ಕೂಡ ಅಲ್ಲಿ ಸರಿಯಾಗಿ ಲಭ್ಯವಾಗುತ್ತಿಲ್ಲ. ಕೆಜಿ ಆಲೂಗಡ್ಡೆ ದರ 200ರೂ.ಗೆ ತಲುಪಿದೆ. ಟೊಮೆಟೋ ಕೆಜಿಗೆ 200ರೂ,, ಬೆಂಡೆಕಾಯಿ ಕೆಜಿಗೆ 200ರೂ., ಬದನೆಕಾಯಿ ಕೆಜಿಗೆ 160 ರೂ., ಕ್ಯಾರೆಟ್ ಕೆಜಿಗೆ ರೂ. 200, ಬೀನ್ಸ್ ಕೆಜಿಗೆ 320 ರೂ.ದರದಲ್ಲಿ ಮಾರಾಟವಾಗುತ್ತಿದೆ.