ಪುರುಷರನ್ನು ಕಾಡುವ ಬಂಜೆತನ ಮತ್ತವರ ಕುಟುಂಬಸ್ಥರಲ್ಲಿ ಕ್ಯಾನ್ಸರ್ ಅಪಾಯದ ನಡುವೆ ಸಂಬಂಧವಿದೆ ಎಂಬುದು ಇತ್ತೀಚಿನ ಅಧ್ಯಯನವೊಂದರಲ್ಲಿ ಬೆಳಕಿಗೆ ಬಂದಿದೆ. ಮಕ್ಕಳನ್ನು ಹೊಂದಲು ತೊಂದರೆ ಇರುವ ಪುರುಷರ ಕುಟುಂಬಗಳು ಕೆಲವು ರೀತಿಯ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಹೆಚ್ಚಿನ ಅಪಾಯವನ್ನು ಹೊಂದಿರಬಹುದು ಎಂದು ಸಂಶೋಧಕರು ಅಭಿಪ್ರಾಯಪಟ್ಟಿದ್ದಾರೆ. ಮೂಳೆ ಮತ್ತು ಕೀಲುಗಳ ಕ್ಯಾನ್ಸರ್, ಕೊಲೊನ್ ಮತ್ತು ವೃಷಣಗಳಿಗೆ ಸಂಬಂಧಿಸಿದ ಕ್ಯಾನ್ಸರ್ ಇದರೊಂದಿಗೆ ನಂಟು ಹೊಂದಿವೆ.
ಬಂಜೆತನದೊಂದಿಗೆ ಹೋರಾಡುವ ಪುರುಷರು ಕ್ಯಾನ್ಸರ್, ಹೃದ್ರೋಗ ಮತ್ತು ಸ್ವಯಂ ನಿರೋಧಕ ಕಾಯಿಲೆಗಳಿಗೆ ತುತ್ತಾಗುವ ಹೆಚ್ಚಿನ ಸಾಧ್ಯತೆಗಳನ್ನು ಹೊಂದಿರುತ್ತಾರೆ. ಅವರ ಕುಟುಂಬಗಳು ಸಹ ಅದೇ ರೀತಿಯ ಅಪಾಯವನ್ನು ಎದುರಿಸುತ್ತಿವೆಯೇ ಎಂಬುದನ್ನು ತಿಳಿಯಲು ಸಂಶೋಧನೆ ನಡೆಸಲಾಗಿತ್ತು.
ವಿಜ್ಞಾನಿಗಳ ಪ್ರಕಾರ ಕ್ಯಾನ್ಸರ್ ಅಪಾಯವನ್ನು ವೈಯಕ್ತಿಕವಾಗಿ ನಿರ್ಣಯಿಸಲು ಅಧ್ಯಯನದ ಫಲಿತಾಂಶಗಳು ಸಹಾಯಕವಾಗಬಹುದು. ಈ ಮೂಲಕ ಕ್ಯಾನ್ಸರ್ ತಡೆಗಟ್ಟುವಲ್ಲಿ ಯಶಸ್ಸು ಸಹ ಸಿಗಬಹುದು.
ಬಂಜೆತನದಿಂದ ಹೋರಾಡುತ್ತಿರುವ ಪುರುಷರ ಕುಟುಂಬಗಳು ಮೂಳೆ ಮತ್ತು ಕೀಲುಗಳು, ಮೃದು ಅಂಗಾಂಶಗಳು, ಕೊಲೊನ್ ಮತ್ತು ವೃಷಣಗಳ ಕ್ಯಾನ್ಸರ್ ಅಪಾಯವನ್ನು ಹೆಚ್ಚಾಗಿ ಹೊಂದಿರುತ್ತಾರೆ ಎಂಬುದನ್ನು ಅಧ್ಯಯನವು ಕಂಡುಹಿಡಿದಿದೆ. ಸಂಶೋಧಕರು ಈ ಅಧ್ಯಯನಕ್ಕಾಗಿ ಉತಾಹ್ ಪಾಪ್ಯುಲೇಶನ್ ಡೇಟಾಬೇಸ್ ಅನ್ನು ಬಳಸಿದ್ದಾರೆ. ಇದು ಆನುವಂಶಿಕ ಮತ್ತು ಸಾರ್ವಜನಿಕ ಆರೋಗ್ಯ ಮಾಹಿತಿಯನ್ನು ಒಳಗೊಂಡಿದೆ.
ಬಂಜೆತನದಿಂದ ಬಳಲುತ್ತಿರುವ ಪುರುಷರ ಪೋಷಕರು, ಒಡಹುಟ್ಟಿದವರು, ಮಕ್ಕಳು ಮತ್ತು ಚಿಕ್ಕಪ್ಪ, ಚಿಕ್ಕಮ್ಮ, ತಾಯಿಯ ಚಿಕ್ಕಪ್ಪ ಮತ್ತು ಸೋದರ ಸಂಬಂಧಿಗಳನ್ನು ಅಧ್ಯಯನಕ್ಕೆ ಒಳಪಡಿಸಲಾಗಿದೆ. ಕುಟುಂಬದ ಸದಸ್ಯರಲ್ಲಿ ತಳಿಶಾಸ್ತ್ರ, ಪರಿಸರ ಮತ್ತು ಜೀವನಶೈಲಿ ಒಂದೇ ಆಗಿರುವುದರಿಂದ ಕ್ಯಾನ್ಸರ್ ಅಪಾಯದ ಮೇಲೆ ಪರಿಣಾಮ ಬೀರುವ ಅಂಶಗಳನ್ನು ಗುರುತಿಸುವುದು ಸುಲಭವಾಗುತ್ತದೆ ಎನ್ನುತ್ತಾರೆ ಸಂಶೋಧಕರು.
ಕುಟುಂಬದಲ್ಲಿ ಕ್ಯಾನ್ಸರ್‌ನ ಸಾಮಾನ್ಯ ಅಪಾಯವನ್ನು ಒಮ್ಮೆ ನಿರ್ಣಯಿಸಿದರೆ, ಅದರ ಕಾರಣಗಳನ್ನು ಹೆಚ್ಚು ನಿಖರವಾಗಿ ಮೌಲ್ಯಮಾಪನ ಮಾಡಬಹುದು. ಹಾಗಾಗಿ ಸಂಶೋಧಕರು ವಿವಿಧ ರೀತಿಯ ಕ್ಯಾನ್ಸರ್ ಅನ್ನು ಅಧ್ಯಯನ ಮಾಡಿದ್ದಾರೆ. 13 ನಿರ್ದಿಷ್ಟ ಮಾದರಿಗಳನ್ನು ಗುರುತಿಸುವ ಮೂಲಕ ಅಲ್ಗಾರಿದಮ್ ಅನ್ನು ಅಭಿವೃದ್ಧಿಪಡಿಸಿದ್ದಾರೆ.
ವೈಯಕ್ತಿಕ ಕ್ಯಾನ್ಸರ್‌ಗಳನ್ನು ನೋಡುವುದಕ್ಕಿಂತ ಹೆಚ್ಚಾಗಿ ಕುಟುಂಬಗಳಾದ್ಯಂತ ಒಂದೇ ರೀತಿಯ ಅನೇಕ ಕ್ಯಾನ್ಸರ್‌ಗಳಿಗೆ ಅಪಾಯಕಾರಿ ಅಂಶಗಳನ್ನು ಪತ್ತೆ ಮಾಡುವ ಮೂಲಕ ಈ ಮಾದರಿಗಳನ್ನು ವಿವರಿಸಲಾಗಿದೆ. ಕ್ಯಾನ್ಸರ್ ಮತ್ತು ಬಂಜೆತನ ಎರಡೂ ಗಂಭೀರ ಕಾಯಿಲೆಗಳು. ಹಾಗಾಗಿ ಈ ವಿಧಾನವು ಕುಟುಂಬಗಳ ಒಂದೇ ರೀತಿಯ ಗುಂಪುಗಳನ್ನು ರಚಿಸಲು ಸಹಾಯ ಮಾಡುತ್ತದೆ.
ಪುರುಷ ಬಂಜೆತನ ಮತ್ತು ಕ್ಯಾನ್ಸರ್ ಅಪಾಯದ ನಡುವಿನ ಸಂಬಂಧವನ್ನು ಸಂಪೂರ್ಣವಾಗಿ ಅರ್ಥಮಾಡಿಳ್ಳಲು ಇನ್ನಷ್ಟು ಸಂಶೋಧನೆಯ ಅಗತ್ಯವಿದೆ. ಸಮಸ್ಯೆಗಳನ್ನು ಕುಟುಂಬಗಳೊಂದಿಗೆ ಚರ್ಚಿಸುವುದು ಮತ್ತು ವೈದ್ಯರಿಂದ ಸಲಹೆ ಪಡೆಯುವುದು ಮುಖ್ಯ.