ನವದೆಹಲಿ: ಎಲ್ಲೆಡೆ ಕೊರೊನಾ ಮೂರನೇ ಅಲೆ ಆತಂಕ ಮೂಡಿಸುತ್ತಿದ್ದು, ಇಲ್ಲಿಯವರೆಗೆ ಹೆಚ್ಚಿನ ಆತಂಕಕ್ಕೆ ಕಾರಣವಾಗಿದ್ದ ದೆಹಲಿಯಲ್ಲಿ ಸೋಂಕಿತರ ಸಂಖ್ಯೆ ಕ್ಷೀಣಿಸುತ್ತ ಸಾಗುತ್ತಿದೆ. ಈ ಸಮಾಧಾನಕರ ಸಂಗತಿಯ ಮಧ್ಯೆಯೇ ಅಲ್ಲಿ ಮತ್ತೊಂದು ಆತಂಕ ಜನರನ್ನು ಹೆಚ್ಚಾಗಿ ಕಾಡುತ್ತಿದೆ.
ದೆಹಲಿಯಲ್ಲಿ ಸೋಂಕು ಹೆಚ್ಚಾಗಿ ಗರ್ಭಿಣಿಯರನ್ನು ಕಾಡುತ್ತಿದೆ. ಅಲ್ಲಿನ ಲೋಕನಾಯಕ ಜೈ ಪ್ರಕಾಶ್ ನಾರಾಯಣ ಆಸ್ಪತ್ರೆಯಲ್ಲಿ 30 ಜನ ಗರ್ಭಿಣಿಯರಲ್ಲಿ ಸೋಂಕು ಕಾಣಿಸಿಕೊಂಡಿದೆ. ಈ ಮಹಿಳೆಯರು ಹೆರಿಗೆಗೆಂದು ಆಸ್ಪತ್ರೆಗೆ ಆಗಮಿಸಿದ್ದ ಸಂದರ್ಭದಲ್ಲಿ ಅವರನ್ನು ಪರೀಕ್ಷೆಗೆ ಒಳಪಡಿಸಿದಾಗ ಅವರಲ್ಲಿ ಸೋಂಕು ಕಾಣಿಸಿಕೊಂಡಿದೆ.
ಈ ಪೈಕಿ 15 ಜನ ಗರ್ಭಿಣಿಯರು ಆಸ್ಪತ್ರೆಯಲ್ಲಿಯೇ ದಾಖಲಾಗಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಆದರೆ, ಯಾರೊಬ್ಬರು ಸೋಂಕಿನ ಗಂಭೀರತೆಯಿಂದ ಬಳಲುತ್ತಿಲ್ಲ. ಇಬ್ಬರು ಮಹಿಳೆಯರು ಮಾತ್ರ ರಕ್ತಹೀನತೆಯಿಂದ ಬಳಲುತ್ತಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನೂ ಸಮಾಧಾನಕರ ಸಂಗತಿ ಎಂದರೆ ನವಜಾತ ಶಿಶುಗಳಲ್ಲಿ ಸೋಂಕು ಕಾಣಿಸುತ್ತಿಲ್ಲ. ಗರ್ಭಿಣಿಯರಲ್ಲಿ ಸಾಮಾನ್ಯರಂತೆಯೇ ಸೋಂಕಿನ ಲಕ್ಷಣ ಕಂಡು ಬಂದಿದೆ. ಕೊರೊನಾ ಲಕ್ಷಣಗಳು ಕಂಡು ಬಂದರೆ ಕೂಡಲೇ ಆಸ್ಪತ್ರೆ ಸಂಪರ್ಕಿಸಿ ಎಂದು ವೈದ್ಯರು ಹೇಳಿದ್ದಾರೆ.