ವಡೋದರಾ: ಗುಜರಾತ್ ನಲ್ಲಿ ನಡೆದ ಬೆಳವಣಿಗೆಯೊಂದರಲ್ಲಿ ಶಾಲಾ ವಿದ್ಯಾರ್ಥಿ, ವಿದ್ಯಾರ್ಥಿನಿ ಪರಸ್ಪರ ಮೋಹದಿಂದ ಮನೆಬಿಟ್ಟು ಪರಾರಿಯಾದ ಘಟನೆ ನಡೆದಿದೆ.
9 ನೇ ತರಗತಿಯಲ್ಲಿ ಓದುತ್ತಿರುವ ಹುಡುಗ-ಹುಡುಗಿ ನಾಪತ್ತೆಯಾದ 13 ದಿನಗಳ ನಂತರ ಭಾನುವಾರ ವಾಪಿಯಲ್ಲಿ ಪತ್ತೆಯಾಗಿದ್ದಾರೆ. ಮಾರ್ಚ್ ತಿಂಗಳಿನಿಂದ ಶಾಲೆ ಮುಚ್ಚಿದ್ದ ಕಾರಣ ಈ ಹುಡುಗ, ಹುಡುಗಿ ಭೇಟಿಯಾಗಲು ಸಾಧ್ಯವಾಗಿರಲಿಲ್ಲ. ಇತ್ತೀಚೆಗೆ ಅವರು ಭೇಟಿಯಾಗಿದ್ದು, ಒಟ್ಟಿಗೆ ಇರಲು ಬಯಸಿ ಮನೆಯಿಂದ ಓಡಿ ಹೋಗಲು ನಿರ್ಧರಿಸಿದ್ದಾರೆ.
ಮನೆ ಬಿಟ್ಟ ಹುಡುಗ ಮನೆಯಿಂದ 25 ಸಾವಿರ ರೂ. ತೆಗೆದುಕೊಂಡು ಬಂದಿದ್ದು, ಹುಡುಗಿ 5000 ರೂ. ಸಹಿತ ಬಂದಿದ್ದಾಳೆ. ರಣೋಲಿ ರೈಲ್ವೆ ನಿಲ್ದಾಣಕ್ಕೆ ಅವರು ಹೋಗಿದ್ದು, ಅಲ್ಲಿ ರೈಲು ಸಿಗದ ಕಾರಣ ಸಯಾಜಿ ಗುಂಜ್ ಗೆ ತೆರಳಿ ಅಲ್ಲಿಂದ ಬಾಡಿಗೆ ಟ್ಯಾಕ್ಸಿಯಲ್ಲಿ ವಾಪಿಗೆ ತೆರಳಿದ್ದಾರೆ.
ಬಾಲಕ ತನ್ನ ಕುಟುಂಬದವರೊಂದಿಗೆ ಈ ಪ್ರದೇಶಕ್ಕೆ ಭೇಟಿ ನೀಡುತ್ತಿದ್ದ ಕಾರಣ ಆತನಿಗೆ ಊರಿನ ಬಗ್ಗೆ ಗೊತ್ತಿತ್ತು. ತಿಂಗಳಿಗೆ 500 ರೂಪಾಯಿ ಬಾಡಿಗೆ ರೂಮ್ ಪಡೆದ ಇಬ್ಬರು ಒಟ್ಟಿಗೆ ವಾಸವಾಗಿದ್ದಾರೆ. ಹುಡುಗ ಗಾರ್ಮೆಂಟ್ ಅಂಗಡಿಗೆ ಕೆಲಸಕ್ಕೆ ಹೋಗುತ್ತಿದ್ದ. ಮಾತ್ರವಲ್ಲ ಪ್ರತೀದಿನ 366 ರೂಪಾಯಿ ಗಳಿಸುತ್ತಿದ್ದ. ಈ ನಡುವೆ ಆತ ತನ್ನ ಸ್ನೇಹಿತನೊಬ್ಬನನ್ನು ಸಂಪರ್ಕಿಸಿದ್ದಾನೆ.
ಆತನಿಂದ ಪೊಲೀಸರಿಗೆ ಮಾಹಿತಿ ಗೊತ್ತಾಗಿದೆ. ಗುಪ್ತಚರ ವಿಭಾಗದ ಪೊಲೀಸರು ಮತ್ತು ತಾಂತ್ರಿಕ ಕಣ್ಗಾವಲು ಘಟಕ ಮೊಬೈಲ್ ಕರೆ ಆಧರಿಸಿ ವಿದ್ಯಾರ್ಥಿಗಳನ್ನು ಪತ್ತೆಹಚ್ಚಿದ್ದಾರೆ. ಹುಡುಗ-ಹುಡುಗಿ ನಾಪತ್ತೆಯಾಗಿದ್ದರಿಂದ ಅವರ ಕುಟುಂಬದವರು ದೂರು ನೀಡಿದ್ದರು. ಇಬ್ಬರನ್ನು ವಾಪಿಯಿಂದ ವಡೋದರಾಕ್ಕೆ ಕರೆದುಕೊಂಡು ಬರಲಾಗಿದೆ. ಇಬ್ಬರಿಗೂ ದೈಹಿಕ ಸಂಬಂಧವಿತ್ತು ಎಂದು ಬಾಲಕಿ ಪೊಲೀಸರಿಗೆ ತಿಳಿಸಿದ್ದು, ಆಕೆಯನ್ನು ವೈದ್ಯಕೀಯ ಪರೀಕ್ಷೆಗೆ ಕಳುಹಿಸಲಾಗಿದೆ. ಪೊಲೀಸರು ಮುಂದಿನ ಕ್ರಮಕೈಗೊಂಡಿದ್ದಾರೆ ಎಂದು ಹೇಳಲಾಗಿದೆ.