ಗುತ್ತಿಗೆ ನೌಕರರ ಮುಷ್ಕರದಿಂದಾಗಿ ಬಂದ್ ಆಗಿದ್ದ ಹೆದ್ದಾರಿಯಲ್ಲಿ ಸಾಗುತ್ತಿದ್ದ ಆಂಬುಲೆನ್ಸ್ ಒಂದರಲ್ಲಿ ಇದ್ದ ಶಿಶುವೊಂದು ಮೃತಪಟ್ಟ ಘಟನೆ ಅಮೃತಸರ-ದೆಹಲಿ ರಾಷ್ಟ್ರೀಯ ಹೆದ್ದಾರಿಯಲ್ಲಿ ಜರುಗಿದೆ.
ಖನ್ನಾ ಎಂಬ ಊರಿನ ಬಳಿ ಹೆದ್ದಾರಿಯಲ್ಲಿ ಪ್ರತಿಭಟನೆಗೆ ಮುಂದಾಗಿದ್ದ ಪಂಜಾಬ್ ಠೇಕಾ ಮುಲಾಜ಼ಾಮ್ ಒಕ್ಕೂಟ (ಗುತ್ತಿಗೆ ನೌಕರರ ಒಕ್ಕೂಟ) ಧರಣಿ ಇಟ್ಟುಕೊಂಡಿತ್ತು. ರಸ್ತೆಗಳ ಮೇಲೆ ಪ್ರತಿಭಟನಾಕಾರರು ಟೆಂಟ್‌ಗಳನ್ನು ಹಾಕಿಕೊಂಡಿದ್ದ ಕಾರಣ ರಸ್ತೆಯಲ್ಲಿ ಸಂಚಾರ ಮಾಡಲು ಸಾರ್ವಜನಿಕರಿಗೆ ಭಾರೀ ಪ್ರಯಾಸದ ಅನುಭವವಾಗಿದೆ.
ಆದರೆ, ಈ ವಿಚಾರವಾಗಿ ಸ್ಪಷ್ಟನೆ ನೀಡಿರುವ ಉಪ ವಿಭಾಗೀಯ ಮ್ಯಾಜಿಸ್ಟ್ರೇಟ್ ಮಂಜಿತ್ ಕೌರ್, ಆಂಬುಲೆನ್ಸ್‌ಗೆ ತೆರಳಲು ಪ್ರತಿಭಟನಾಕಾರರು ದಾರಿ ಕೊಟ್ಟಿದ್ದು, ಶಿಶುವಿನ ಮರಣಕ್ಕೆ ಟ್ರಾಫಿಕ್ ಜಾಮ್ ಕಾರಣವಲ್ಲ ಎಂದಿದ್ದಾರೆ. ಪ್ರಕರಣದ ತನಿಖೆ ನಡೆಸುವುದಾಗಿ ಕೌರ್ ತಿಳಿಸಿದ್ದಾರೆ.
ಇದಕ್ಕೆ ತದ್ವಿರುದ್ಧವಾದ ಹೇಳಿಕೆ ನೀಡಿದ ಸಂತ್ರಸ್ತರಾದ ಸೋನಿ ಮತ್ತವರ ಪತ್ನಿ ಕಾಜಲ್, ಅನಾರೋಗ್ಯಕ್ಕೀಡಾಗಿದ್ದ ತಮ್ಮ ಒಂದು ತಿಂಗಳ ಮಗ ಆರವ್‌ನನ್ನು ಆಸ್ಪತ್ರೆಗೆ ಕೊಂಡೊಯ್ಯುವ ವೇಳೆ ಪ್ರತಿಭಟನಾಕಾರರು ಹೆದ್ದಾರಿ ಬಂದ್ ಮಾಡಿದ್ದ ಕಾರಣ ಸಂಚಾರ ದಟ್ಟಣೆಯಲ್ಲಿ ಸಿಲುಕಿದ್ದಾಗಿ ತಿಳಿಸಿದ್ದಾರೆ. ಪ್ರತಿಭಟನಾಕಾರರಿಗೆ ಪದೇ ಪದೇ ಬೇಡಿಕೊಂಡರೂ ಮುಂದೆ ಸಾಗಲು ದಾರಿ ಬಿಡಲಿಲ್ಲ ಎಂದು ಮಗುವಿನ ಹೆತ್ತವರು ತಿಳಿಸಿದ್ದಾರೆ.