ಕಾನ್ಪುರ: ಆಸ್ಪತ್ರೆಯ ಶೌಚಾಲಯದಲ್ಲಿ ಜನಿಸಿದ ಶಿಶು ಶೌಚಾಲಯದ ಕಮೋಡ್ ನಲ್ಲಿ ತಲೆ ಸಿಲುಕಿ ಮೃತಪಟ್ಟಿರುವ ಆಘಾತಕಾರಿ ದುರ್ಘಟನೆ ಲಾಲಾ ಲಜಪತ್ ರಾಯ್ ಆಸ್ಪತ್ರೆಯಲ್ಲಿ ನಡೆದಿದೆ.
ಗರ್ಭಿಣಿ ಹಸೀನ್ ಬಾನೊ (30) ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದ್ದರಿಂದ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ಆದರೆ ತುರ್ತು ಚಿಕಿತ್ಸಾ ವಿಭಾಗಕ್ಕೆ ದಾಖಲಿಸಲು ಆಸ್ಪತ್ರೆ ವೈದ್ಯರು ನಿರಾಕರಿಸಿದ್ದಾರೆ ಎನ್ನಲಾಗಿದೆ. ಇವರ ಪತಿ ಎಷ್ಟೇ ಮನವಿ ಮಾಡಿದ್ರೂ ಪ್ರಯೋಜನವಾಗಿಲ್ಲ. ಹೆರಿಗೆ ನೋವು ಜಾಸ್ತಿಯಾದ್ದರಿಂದ ಮಹಿಳೆ ಶೌಚಾಲಯಕ್ಕೆ ತೆರಳಿದ್ದು, ಅಲ್ಲೇ ಮಗುವಿಗೆ ಜನ್ಮ ನೀಡಿದ್ದಾರೆ.
ಆದರೆ, ಮಗು ಜಾರಿಬಿದ್ದು ಶೌಚಾಲಯದ ಕಮೋಡ್ ನಲ್ಲಿ ನವಜಾತ ಶಿಶುವಿನ ತಲೆ ಸಿಕ್ಕಿಹಾಕಿಕೊಂಡಿದೆ. ಆಸ್ಪತ್ರೆಯ ಸಿಬ್ಬಂದಿ ಶೌಚಾಲಯದ ಸೀಟನ್ನು ಮುರಿದು ಶಿಶುವನ್ನು ಹೊರತೆಗೆದಿದ್ದಾರೆ. ಆದರೆ, ಅಷ್ಟರಲ್ಲಾಗಲೇ ಮಗು ಸಾವನ್ನಪ್ಪಿತ್ತು.
ಇನ್ನು ಈ ಸಂಬಂಧ ಗಣೇಶ್ ಶಂಕರ್ ವಿದ್ಯಾರ್ಥಿ ಸ್ಮಾರಕ ವೈದ್ಯಕೀಯ ಕಾಲೇಜು ಪ್ರಾಂಶುಪಾಲರಾದ ಡಾ. ಸಂಜಯ್ ಕಲಾ ಅವರು ತನಿಖೆಗೆ ಆದೇಶಿಸಿದ್ದಾರೆ. ತನಿಖೆ ಮಾಡಲು ಸಮಿತಿ ರಚಿಸಲಾಗಿದ್ದು, ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಅವರು ಭರವಸೆ ನೀಡಿದ್ದಾರೆ.