ಬೆಂಗಳೂರು: ಕಾಗದ ತಯಾರಿಕೆಗೆ ಅಗತ್ಯವಾಗಿ ಬೇಕಾದ ನೀಲಗಿರಿ ಬೆಳೆಯಲು ಅರಣ್ಯ ಇಲಾಖೆ ಅನುಮತಿ ನೀಡಿದಲ್ಲಿ ಮೈಸೂರು ಪೇಪರ್ ಮಿಲ್(ಎಂಪಿಎಂ) ಕಾರ್ಖಾನೆ ಪುನಾರಂಭ ಮಾಡಲು ಸಾಧ್ಯ ಎಂದು ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ್ ತಿಳಿಸಿದ್ದಾರೆ.
ವಿಧಾನ ಪರಿಷತ್ ನಲ್ಲಿ ಬಿಜೆಪಿ ಸದಸ್ಯ ಎಸ್. ರುದ್ರೇಗೌಡ ಅವರು ಕೇಳಿದ ಪ್ರಶ್ನೆಗೆ ಉತ್ತರ ನೀಡಿದ ಸಚಿವರು, ಕಚ್ಚಾ ವಸ್ತುವಿನ ಕೊರತೆಯ ಕಾರಣ ಕಾರ್ಖಾನೆ ನಿರ್ವಹಣೆಗೆ ಯಾರೂ ಮುಂದೆ ಬರುತ್ತಿಲ್ಲ ಎಂದು ತಿಳಿಸಿದ್ದಾರೆ.
ಎಂಪಿಎಂ 1,102 ಕೋಟಿ ರೂ. ಹೊಣೆಗಾರಿಕೆ ಹೊಂದಿದ್ದು, ಅದನ್ನು ತೀರಿಸಬೇಕಾಗಿದೆ. ಎಲ್ಲದಕ್ಕೂ ಸರ್ಕಾರ ವ್ಯವಸ್ಥೆ ಮಾಡಲಿದೆ. ನೀಲಗಿರಿಯಲ್ಲಿಯೇ ಕಡಿಮೆ ನೀರು ಬಳಸಬಹುದಾದ, ಅಂತರ್ಜಲಕ್ಕೆ ತೊಂದರೆ ಆಗದಂತಹ ಮರಗಳು ಅಭಿವೃದ್ಧಿಗೊಂಡಿದ್ದು, ಅವುಗಳನ್ನು ಬೆಳೆಸಲು ಚಿಂತನೆ ನಡೆದಿದೆ. ನೀಲಗಿರಿ ಹೊರತಾಗಿ ಬೇರೆ ಕಚ್ಚಾ ವಸ್ತು ಬಳಕೆ ಬಗ್ಗೆಯೂ ಪರಿಶೀಲನೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.
ಎಂಪಿಎಂ ಪುನಸ್ಚೇತನ ಅಸಾಧ್ಯವೆಂದು ನಿರ್ಧರಿಸಿ ಅನೇಕ ವರ್ಷಗಳ ಹಿಂದೆಯೇ ಉತ್ಪಾದನೆ ಸ್ಥಗಿತಗೊಳಿಸಲಾಗಿತ್ತು. ಖಾಸಗಿ ಕಂಪನಿಗಳಿಗೆ ಗುತ್ತಿಗೆ ಆಧಾರದಲ್ಲಿ ನೀಡುವ ಪ್ರಕ್ರಿಯೆಗೆ ನಿರೀಕ್ಷಿತ ಫಲ ದೊರೆತಿಲ್ಲ. ಎಂಪಿಎಂ ನೆಡುತೋಪುಗಳಲ್ಲಿ ನೀಲಗಿರಿ ಬೆಳೆಯಲು ಮತ್ತು ಹೊಣೆಗಾರಿಕೆ ಇಲ್ಲದ ಕಾರ್ಯ ಚಟುವಟಿಕೆಗಳ ಷರತ್ತನ್ನು ಕೆಲವು ಕಂಪನಿಗಳು ವಿಧಿಸಿದ ಕಾರಣ ಹಿನ್ನಡೆಯಾಗಿದೆ. ನೀಲಗಿರಿ ಬೆಳೆಯಲು ಅನುಮತಿ ನೀಡುವ ಕುರಿತು ಅರಣ್ಯ ಇಲಾಖೆ ತಜ್ಞರ ಸಮಿತಿ ರಚಿಸಲಾಗುವುದು. ಬಾಕಿ ವಿದ್ಯುತ್ ಶುಲ್ಕ ಮನ್ನಾ ಮಾಡಲು ಪ್ರಸ್ತಾವನೆ ಸಲ್ಲಿಸಲಾಗುವುದು ಎಂದು ಹೇಳಿದ್ದಾರೆ.