ಇಂದೋರ್ ರುಚಿಕರವಾದ ಪೋಹಾಗೆ ಹೆಸರುವಾಸಿಯಾಗಿದೆ. ಇತ್ತೀಚಿಗೆ ಪೋಹಾವಾಲಾ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. ಈ ವಿಡಿಯೋ ಎಂಎನ್ಸಿಗಳಲ್ಲಿ ಕೆಲಸ ಮಾಡುವವರು ಸೇರಿದಂತೆ ಅನೇಕರ ಹುಬ್ಬೇರುವಂತೆ ಮಾಡಿದೆ. ಎಂಎನ್ಸಿಗಳಲ್ಲಿ ಕೆಲಸ ಮಾಡುತ್ತಿರುವವರೂ ಆಶ್ಚರ್ಯಪಡುವಷ್ಟರ ಮಟ್ಟಿಗೆ ಈ ಪೋಹಾವಾಲಾನ ಗಳಿಕೆ ಇದೆ ಎನ್ನಲಾಗಿದೆ.
ಹಲವಾರು ವ್ಯಕ್ತಿಗಳು ಉನ್ನತ ಶಿಕ್ಷಣವನ್ನು ಪಡೆದು ಬಹುರಾಷ್ಟ್ರೀಯ ಕಂಪನಿಗಳಲ್ಲಿ ಕೆಲಸ ಮಾಡುತ್ತಿದ್ದರೂ ಸಹ ಅವರ ಗಳಿಕೆಗಿಂತ ದುಪ್ಪಟ್ಟು ಗಳಿಕೆಯನ್ನು ಇಂದೋರ್ ಮೂಲದ ಈ ತಿಂಡಿ ವ್ಯಾಪಾರಿ ಸಂಪಾದಿಸುತ್ತಿದ್ದಾರೆ. ಇವರು ಸರಾಸರಿ ಮಾಸಿಕ ಆದಾಯ 5 ಲಕ್ಷ ರೂಪಾಯಿಗಳವರೆಗೆ ಹೊಂದಿದ್ದಾರೆ.
ಬೀದಿ ಬದಿಯಲ್ಲಿ ಪೋಹಾ ಅಂಗಡಿ ಹಾಕಿಕೊಂಡಿರುವ ಈ ವ್ಯಕ್ತಿಯು ತಮ್ಮ ಒಂದೇ ಗಾಡಿಯಿಂದ ತಿಂಗಳಿಗೆ 75 ಸಾವಿರ ರೂಪಾಯಿ ಲಾಭ ಗಳಿಸುತ್ತಾರಂತೆ.
ಸೋಶಿಯಲ್ ಮೀಡಿಯಾಗಳಲ್ಲಿ ವೈರಲ್ ಆಗಿರುವ ವಿಡಿಯೋದಲ್ಲಿ ಪೋಹಾ ಅಂದರೆ ಅವಲಕ್ಕಿ ಮಾರಾಟಗಾರನು ತನ್ನ ಒಂದೇ ಗಾಡಿಯಿಂದ ದಿನಕ್ಕೆ 2500 ರೂಪಾಯಿ ಲಾಭವನ್ನು ಸಂಪಾದಿಸುತ್ತಾನಂತೆ. ಅಂದರೆ ತಿಂಗಳಿಗೆ ಒಂದು ಗಾಡಿಯಿಂದ 75 ಸಾವಿರ ರೂಪಾಯಿ ಲಾಭ ಇವರದ್ದಾಗುತ್ತಿದೆ. ಆಶ್ಚರ್ಯಕರ ವಿಚಾರ ಏನಂದರೆ ಇವರು ಆರು ಪೋಹಾ ಅಂಗಡಿಗಳ ಮಾಲೀಕರಾಗಿದ್ದಾರೆ. ಹೀಗಾಗಿ ಇವರ ಮಾಸಿಕ ಲಾಭ ಎಷ್ಟಿರಬಹುದು ಎಂಬುದನ್ನು ನೀವೇ ಲೆಕ್ಕಾಚಾರ ಮಾಡಿಕೊಳ್ಳಬಹುದಾಗಿದೆ.