ದೇಶದ ಜನರನ್ನು ಕೊರೊನಾ ಮಾತ್ರವಲ್ಲ ಡೆಂಗ್ಯೂ ಕೂಡ ಕಂಗೆಡಿಸಿದೆ. ದಿನ ದಿನಕ್ಕೂ ಡೆಂಗ್ಯೂ ಪ್ರಕರಣ ಹೆಚ್ಚಾಗ್ತಿದೆ. ಕೊರೊನಾದ ಎರಡನೇ ಅಲೆ ವೇಳೆ ಬ್ಲಾಕ್ ಫಂಗಸ್ ಸುದ್ದಿ ಮಾಡಿತ್ತು. ಈಗ ಮತ್ತೆ ಬ್ಲಾಕ್ ಫಂಗಸ್ ಪತ್ತೆಯಾಗಿದೆ.
ಅಚ್ಚರಿಯ ವಿಷಯವೆಂದರೆ ಬ್ಲಾಕ್ ಫಂಗಸ್, ಡೆಂಗ್ಯೂ ರೋಗಿಗಳಲ್ಲಿ ಗೋಚರಿಸುತ್ತಿದೆ. ಇಂದೋರ್ನಲ್ಲಿ 50 ವರ್ಷದ ರೋಗಿಯಲ್ಲಿ ಈ ಫಂಗಸ್ ಕಾಣಿಸಿಕೊಂಡಿದೆ. ಒಂದು ವಾರದ ಹಿಂದೆ ಡೆಂಗ್ಯೂನಿಂದ ಗುಣಮುಖನಾಗಿದ್ದ ಧಾರ್ ಜಿಲ್ಲೆಯ ಈ ರೋಗಿಯಲ್ಲಿ ಈಗ ಮ್ಯೂಕೋರ್ಮೈಕೋಸಿಸ್ ಲಕ್ಷಣಗಳು ಕಂಡುಬರುತ್ತಿವೆ.
ಇಂದೋರ್ನಲ್ಲಿ ಇದು ಮೊದಲ ಪ್ರಕರಣವಾಗಿದೆ. ಇಡೀ ರಾಜ್ಯದಲ್ಲಿ ಇದು ಎರಡನೇ ಪ್ರಕರಣವಾಗಿದೆ. ಇಂದೋರ್ನ ಚೋತ್ರಮ್ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ. ಅಕ್ಟೋಬರ್ 15 ರಂದು ಕಪ್ಪು ಶಿಲೀಂಧ್ರದ ಲಕ್ಷಣಗಳು ಕಾಣಿಸಿಕೊಂಡ ನಂತರ ಆಸ್ಪತ್ರೆಗೆ ದಾಖಲಿಸಲಾಗಿದೆ. ಇದಕ್ಕೂ ಒಂದು ವಾರದ ಹಿಂದೆಯೇ ಈ ವ್ಯಕ್ತಿ ಡೆಂಗ್ಯೂ ಸೋಂಕಿತನಾಗಿದ್ದ.
ಅಕ್ಟೋಬರ್ ಮೊದಲ ವಾರದಲ್ಲಿ, ಜಬಲ್ಪುರದಲ್ಲಿಯೂ ಇದೇ ರೀತಿಯ ಪ್ರಕರಣ ಕಾಣಿಸಿಕೊಂಡಿತ್ತು. ಡೆಂಗ್ಯೂ ನಂತ್ರ ಬ್ಲಾಕ್ ಫಂಗಸ್ ಕಾಣಿಸಿಕೊಂಡಿತ್ತು. ಚಿಕಿತ್ಸೆ ಪಡೆದ ರೋಗಿ ಗುಣಮುಖನಾಗಿದ್ದಾನೆ.