ಮಧ್ಯಪ್ರದೇಶದ ಇಂದೋರ್ನಲ್ಲಿ ಬುಧವಾರ ಕುಡುಕನೊಬ್ಬನ ವಿಚಿತ್ರ ಪ್ರಕರಣ ಬೆಳಕಿಗೆ ಬಂದಿದೆ. ಪೊಲೀಸರು ಆತನಿಂದ 5 ‘ಕದ್ದ’ ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ. ಈತ ಬೈಕ್, ಮಾರಾಟ ಮಾಡಲು ಕದಿಯುತ್ತಿರಲಿಲ್ಲ. ಬದಲಾಗಿ ಕುಡಿದ ಮೇಲೆ ನಡೆದುಕೊಂಡು ಹೋಗಬೇಕೆಂಬ ಕಾರಣಕ್ಕೆ ಕಳವು ಮಾಡುತ್ತಿದ್ದ.
ರವಿ ವರ್ಮಾ, ಕೂಲಿ ಕಾರ್ಮಿಕ, ಪ್ರತಿದಿನ ಬೆಳಿಗ್ಗೆ 4 ಗಂಟೆಗೆ ಕೆಲಸಕ್ಕೆಂದು ಮನೆಯಿಂದ ಹೊರಡುತ್ತಿದ್ದ. ಆದರೆ ಅವನಿಗೆ ಮದ್ಯಪಾನದ ವಿಪರೀತ ಚಟ ಜೊತೆಗೆ ನಡೆಯಲು ತುಂಬಾ ಸೋಮಾರಿತನ. ಹೀಗಾಗಿ ಆತ ಯಾವಾಗಲೂ ತನ್ನ ಜೇಬಿನಲ್ಲಿ ಮೂರು ‘ಮಾಸ್ಟರ್ ಕೀ’ಗಳನ್ನು ಇಟ್ಟುಕೊಂಡಿರುತ್ತಿದ್ದ.
ವರ್ಮಾ, ತನ್ನ ‘ಮ್ಯಾಜಿಕ್ ಕೀ’ ಗಳೊಂದಿಗೆ ಬೈಕ್ ಕಳವು ಮಾಡಿ ಸಾರಿಗೆ ವೆಚ್ಚವನ್ನು ಉಳಿಸುತ್ತಿದ್ದು, ಕದ್ದ ಬೈಕ್ನಲ್ಲಿ ಮದ್ಯದಂಗಡಿಯ ಕಡೆಗೆ ಹೋಗುತ್ತಿದ್ದ. ಕುಡಿದ ಮೇಲೆ ಆ ಬೈಕನ್ನು ಅಲ್ಲಿಯೇ ಬಿಟ್ಟು ಮತ್ತೊಂದು ಮದ್ಯದಂಗಡಿಗೆ ಹೋಗಲು ಇನ್ನೊಂದು ಬೈಕ್ ಆಯ್ಕೆ ಮಾಡಿಕೊಳ್ಳುತ್ತಿದ್ದ.
ಎಸಿಪಿ ತುಷಾರ್ ಸಿಂಗ್ ಮಾತನಾಡಿ, ಏರೋಡ್ರೋಮ್ನ ರವಿ ವರ್ಮಾ ನನ್ನು ಛೋಟಿ ಗ್ವಾಲ್ಟೋಲಿ ಪೊಲೀಸರು ಬಂಧಿಸಿದ್ದಾರೆ ಮತ್ತು ಪೋಲೀಸ್ ಅಧಿಕಾರಿಯೊಬ್ಬರ ಬೈಕ್ ಸೇರಿದಂತೆ ಈತ ಕದ್ದ ಐದು ಬೈಕ್ಗಳನ್ನು ವಶಪಡಿಸಿಕೊಂಡಿದ್ದಾರೆ ಎಂದು ತಿಳಿಸಿದ್ದಾರೆ.
ಸಿಸಿಟಿವಿ ದೃಶ್ಯಾವಳಿಗಳು ಮತ್ತು ತಾಂತ್ರಿಕ ಸಹಾಯದ ಆಧಾರದ ಮೇಲೆ, ಪೊಲೀಸರು ಅವನನ್ನು ಪತ್ತೆಹಚ್ಚಲು ಸಾಧ್ಯವಾಯಿತು. ಆತ ಮದ್ಯ ವ್ಯಸನಿಯಾಗಿದ್ದು, ತಾನು ದುಡಿದ ಎಲ್ಲಾ ಹಣವನ್ನು ಅದಕ್ಕೆ ಖರ್ಚು ಮಾಡುತ್ತಿದ್ದ. ಒಂದು ಸ್ಥಳದಿಂದ ಮತ್ತೊಂದು ಸ್ಥಳಕ್ಕೆ ಪ್ರಯಾಣಿಸಲು, ಮಾಸ್ಟರ್ ಕೀ ಬಳಸಿ ವಿವಿಧ ಸಾರ್ವಜನಿಕ ಸ್ಥಳಗಳಲ್ಲಿ ನಿಲ್ಲಿಸಿದ್ದ ಬೈಕ್ ಕದಿಯುತ್ತಿದ್ದ ಮತ್ತು ಅವುಗಳಲ್ಲಿ ಇಂಧನ ಖಾಲಿಯಾದಾಗ ಅಲ್ಲಿಯೇ ಬಿಡುತ್ತಿದ್ದ. ವರ್ಮಾ ತುಂಬಾ ಅಮಲಿನಲ್ಲಿದ್ದ ಕಾರಣ ಕದ್ದ ಬೈಕ್ಗಳ ಬಗ್ಗೆ ಮಾಹಿತಿ ಪಡೆಯಲು ಪೊಲೀಸರಿಗೆ ಸಾಕುಸಾಕಾಗಿದೆ.
ಪ್ರಾಥಮಿಕ ತನಿಖೆಯಲ್ಲಿ ಆತ ಕದ್ದ ಬೈಕ್ಗಳನ್ನು ಮಾರಾಟ ಮಾಡಿಲ್ಲ, ಬದಲಿಗೆ ಅವುಗಳನ್ನು ಕೇವಲ ಸಾರಿಗೆಗಾಗಿ ಬಳಸಿದ್ದಾನೆ ಎಂದು ತಿಳಿದುಬಂದಿದೆ.