ದಿಢೀರ್ ಆರೋಗ್ಯ ತೊಂದರೆ ಉಂಟಾಗಿದ್ದರಿಂದ ಪೈಲಟ್ ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದು, ನಂತರ ಆಸ್ಪತ್ರೆಯಲ್ಲಿ ಮೃತಪಟ್ಟ ಘಟನೆ ಇಂಡೋನೇಷ್ಯಾದಲ್ಲಿ ನಡೆದಿದೆ.
ಟೇಕ್ ಆಫ್ ಆದ 15 ನಿಮಿಷಗಳ ನಂತರ ಇಂಡೋನೇಷ್ಯಾದಲ್ಲಿ ಪ್ರಯಾಣಿಕ ವಿಮಾನದ ಪೈಲಟ್ ಆರೋಗ್ಯ ಸ್ಥಿತಿ ಹದಗೆಟ್ಟಿದೆ. ದೊಡ್ಡ ಅನಾಹುತವನ್ನು ತಪ್ಪಿಸಿದ ಅವರು ವಿಮಾನವನ್ನು ತುರ್ತು ಲ್ಯಾಂಡಿಂಗ್ ಮಾಡಿದ್ದಾರೆ. ಆಸ್ಪತ್ರೆಗೆ ಕರೆದೊಯ್ಯಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ.
100 ಕ್ಕೂ ಹೆಚ್ಚು ಪ್ರಯಾಣಿಕರಿದ್ದ ಸಿಟಿಲಿಂಕ್ ಇಂಡೋನೇಷ್ಯಾ ವಿಮಾನ ಏರ್ ಬಸ್ A320 ಪೂರ್ವ ಜಾವಾದ ಸುರಬಯಾದಲ್ಲಿನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು ದಕ್ಷಿಣ ಸುಲವೇಸಿ ಪ್ರಾಂತ್ಯದ ಉಜುಂಗ್ ಪಾಂಡಂಗ್ ನಗರಕ್ಕೆ ತೆರಳುತ್ತಿತ್ತು. ಮಾರ್ಗ ಮಧ್ಯೆ ಈ ರೀತಿ ಆಗಿದೆ. ಪೈಲಟ್‌ನ ಸಾವಿಗೆ ತಕ್ಷಣದ ಕಾರಣ ತಿಳಿದಿಲ್ಲ.
ವಿಮಾನಯಾನ ಸಂಸ್ಥೆಯು ಕರ್ತವ್ಯದಲ್ಲಿರುವ ಎಲ್ಲಾ ಸಿಬ್ಬಂದಿಗೆ ವಿಮಾನದ ಮೊದಲು ಆರೋಗ್ಯ ತಪಾಸಣೆ ನಡೆಸಿದೆ. ಪೈಲಟ್ ಫಿಟ್ ಆಗಿದ್ದರು ಎಂದು ಘೋಷಿಸಲಾಗಿದೆ ಎಂದು ಪಿಟಿ ಸಿಟಿಲಿಂಕ್ ಇಂಡೋನೇಷ್ಯಾದ ಅಧ್ಯಕ್ಷರಾದ ದೇವಾ ಕಡೆಕ್ ರೈ ಹೇಳಿದ್ದಾರೆ.
ಪ್ರಯಾಣಿಕರು ಮತ್ತು ಉಳಿದ ಸಿಬ್ಬಂದಿ ಸುರಕ್ಷಿತವಾಗಿದ್ದು, ನಂತರ ಬೇರೆ ವಿಮಾನ ಮತ್ತು ಸಿಬ್ಬಂದಿಯೊಂದಿಗೆ ನಿಗದಿತ ಸ್ಥಳಕ್ಕೆ ತಲುಪಿತು. ಸಿಟಿಲಿಂಕ್ ಇಂಡೋನೇಷ್ಯಾ ಕಡಿಮೆ-ವೆಚ್ಚದ ವಿಮಾನಯಾನ ಸಂಸ್ಥೆಯಾಗಿದ್ದು, ಸರ್ಕಾರಿ ಸ್ವಾಮ್ಯದ ಗರುಡಾ ಇಂಡೋನೇಷ್ಯಾ ಗ್ರೂಪ್ ನ ಅಂಗಸಂಸ್ಥೆಯಾಗಿದೆ. ಇದು 47 ದೇಶೀಯ ಮತ್ತು ಅಂತರಾಷ್ಟ್ರೀಯ ಸ್ಥಳಗಳಿಗೆ 100 ಕ್ಕೂ ಹೆಚ್ಚು ರೂಟ್ ಒದಗಿಸುತ್ತದೆ.