ಬೆಂಗಳೂರು: ಕೋವಿಡ್ ಬಳಿಕ ಮಕ್ಕಳನ್ನು ಕಾಡುವ ರೋಗಗಳು, ಆರೋಗ್ಯ ಸಮಸ್ಯೆಗಳು ಹೆಚ್ಚಾಗುತ್ತಿವೆ. ಅದರಲ್ಲಿಯೂ ಡೆಂಗ್ಯೂ, ಅಡಿನೋ ವೈರಸ್, ನ್ಯೂಮೋನಿಯಾ, ಅಪೌಷ್ಠಿಕತೆ, ಉಸಿರಾಟದ ಸಮಸ್ಯೆಯಿಂದ ಬಳತ್ತಿರುವ ಮಕ್ಕಳ ಸಂಖ್ಯೆಯೂ ಹೆಚ್ಚಾಗಿದೆ. ಈ ನಡುವೆ ಪುಟ್ಟ ಮಕ್ಕಳ ಸಾವಿನ ಸಂಖ್ಯೆಯೂ ಹೆಚ್ಚಿದ್ದು, ಇಂದಿರಾ ಗಾಂಧಿ ಆಸ್ಪತ್ರೆಯ ವೈದ್ಯರು ನೀಡಿರುವ ವರದಿ ಬೆಚ್ಚಿ ಬೀಳಿಸುವಂತಿದೆ.
ರಾಜ್ಯದಲ್ಲಿ ಮಕ್ಕಳಿಗಾಗಿಯೇ ಪ್ರತ್ಯೇಕ ಸೂಪರ್ ಸ್ಪೆಷಾಲಿಟಿ ಆಸ್ಪತ್ರೆ ಇಲ್ಲದಿರುವುದು, ಸೂಕ್ತ ಸಮಯದಲ್ಲಿ ಚಿಕಿತ್ಸೆ ಕೊರತೆ ಕೂಡ ಮಕ್ಕಳ ಸಾವಿಗೆ ಕಾರಣವಾಗುತ್ತಿದೆ. ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಯ ನಿರ್ದೇಶಕ ಡಾ.ಸಂಜಯ್ ನೀಡಿರುವ ವರದಿ ಪ್ರಕಾರ ಕಳೆದ 9 ತಿಂಗಳಲ್ಲಿ ನಮ್ಮ ಆಸ್ಪತ್ರೆಯಲ್ಲಿ 380 ಮಕ್ಕಳು ಸಾವನ್ನಪ್ಪಿದ್ದಾರೆ ಎಂದು ಶಾಕಿಂಗ್ ಸುದ್ದಿ ನೀಡಿದ್ದಾರೆ.
ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆ ಹೊರತುಪಡಿಸಿದರೆ ರಾಜ್ಯದಲ್ಲಿ ಮಕ್ಕಳಿಗಾಗಿ ಪ್ರತ್ಯೇಕವಾದ ಆಸ್ಪತ್ರೆಗಳಿಲ್ಲ. ಮಕ್ಕಳು ಅನಾರೋಗ್ಯಕ್ಕೀಡಾದಾಗ ಬೇರೆ ಬೇರೆ ಊರಿನವರು ಬೆಂಗಳೂರು ದೂರ ಎಂಬ ಕಾರಣಕ್ಕೆ ಅಲ್ಲಿನ ಆಸ್ಪತ್ರೆಗಳಿಗೆ ಮಕ್ಕಳನ್ನು ದಾಖಲಿಸುತ್ತಾರೆ. ತೀವ್ರ ಅನಾರೋಗ್ಯಕ್ಕೀಡಾದ ಮಕ್ಕಳನ್ನು ಬೇರೆ ಬೇರೆ ಆಸ್ಪತ್ರೆಯವರು ಕೊನೇ ಕ್ಷಣದಲ್ಲಿ ಇಂದಿರಾ ಗಾಂಧಿ ಆಸ್ಪತ್ರೆ ರೆಫರ್ ಮಾಡುತ್ತಾರೆ. ಕೊನೇ ಹಂತದಲ್ಲಿ ಮಕ್ಕಳು ಆಸ್ಪತ್ರೆಗೆ ದಾಖಲಾಗುವುದರಿಂದ ಅಂತಹ ಮಕ್ಕಳನ್ನು ಬದುಕಿಸುವುದು ಕಷ್ಟ. ಗೋಲ್ಡನ್ ಟೈಂ ನಲ್ಲಿ ಮಕ್ಕಳಿಗೆ ಸೂಕ್ತ ಚಿಕಿತ್ಸೆ ಸಿಕ್ಕಿದರೆ ಮಕ್ಕಳ ಜೀವ ಉಳಿಸಬಹುದು. ಕೊನೇ ಕ್ಷಣದಲ್ಲಿ ಮಕ್ಕಳು ಆಸ್ಪತ್ರೆಗೆ ದಾಖಲಾಗುವುದು ಕೂಡ ಸಾವು ಸಂಭವಿಸಲು ಪ್ರಮುಖ ಕಾರಣ ಎಂದು ಹೇಳಿದ್ದಾರೆ.
ಇಂದಿರಾ ಗಾಂಧಿ ಆಸ್ಪತ್ರೆಯಲ್ಲಿ ಪ್ರತಿ ತಿಂಗಳು 1400-1500 ಮಕ್ಕಳು ದಾಖಲಾಗುತ್ತಾರೆ. ಈ ವರ್ಷ ಡೆಂಗ್ಯೂ, ನ್ಯುಮೋನಿಯಾ ಕಾಯಿಲೆ ಹೆಚ್ಚಾಗಿರುವುದರಿಂದ ಮಕ್ಕಳ ಸಾವಿನ ಸಂಖ್ಯೆಯೂ ಹೆಚ್ಚಾಗಿದೆ. ಈಗಿನ ವರದಿ ಪ್ರಕಾರ ಪ್ರತಿ ತಿಂಗಳು 40-50 ಮಕ್ಕಳು ಮೃತಪಟ್ಟಿದ್ದಾರೆ. ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿಯೂ ಮಕ್ಕಳಿಗಾಗಿ ಪ್ರತ್ಯೇಕ ಆಸ್ಪತ್ರೆ ಸ್ಥಾಪನೆಯಾದರೆ ಸೂಕ್ತ ಚಿಕಿತ್ಸೆ ಸಿಕ್ಕಿದರೆ ಮಾತ್ರ ಮಕ್ಕಳ ಸಾವಿನ ಪ್ರಮಾಣ ತಡೆಯಬಹುದು.