ಬೆಂಗಳೂರು: ಬಿಬಿಎಂಪಿ ವ್ಯಾಪ್ತಿಯ ಇಂದಿರಾ ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆಗೆ ಹೊಸದಾಗಿ ಗುತ್ತಿಗೆದಾರರ ನೇಮಕ ಮಾಡಲಾಗಿದೆ.
ಸ್ವಾತಂತ್ರ್ಯ ದಿನದ ವೇಳೆಗೆ ಚಪಾತಿ, ರಾಗಿ ಮುದ್ದೆ ಸೇರಿ ಹೊಸ ಮೆನು ಜಾರಿಗೆ ಬರಲಿದೆ. 192 ಇಂದಿರಾ ಕ್ಯಾಂಟೀನ್ ಗಳ ಪರೀಕ್ಷೆ 142 ಕ್ಯಾಂಟೀನ್ ಗಳಿಗೆ ಆಹಾರ ಪೂರೈಕೆಗಾಗಿ ಹೊಸ ಗುತ್ತಿಗೆದಾರರ ನೇಮಕ ಮಾಡಲಾಗಿದೆ. ಇನ್ನೊಂದು ವಾರದಲ್ಲಿ ಕಾರ್ಯಾದೇಶ ನೀಡಲಿದ್ದು, ಆಗಸ್ಟ್ ಎರಡನೇ ವಾರದಿಂದ ಆಹಾರ ಪೂರೈಕೆಯನ್ನು ಗುತ್ತಿಗೆದಾರರು ಆರಂಭಿಸಲಿದ್ದಾರೆ.
ಇಂದಿರಾ ಕ್ಯಾಂಟೀನ್ ಗಳ ಮೆನು ಬದಲಾವಣೆ ಮಾಡಲಾಗಿದ್ದು, ಉಪಹಾರಕ್ಕೆ ಮೂರು ಮಾದರಿ ಆಯ್ಕೆ ನೀಡಲಾಗಿದೆ. ವಾರದ ಏಳು ದಿನವೂ ಬೆಳಗ್ಗೆ ಇಡ್ಲಿ ದೊರೆಯಲಿದೆ. 3 ಇಡ್ಲಿ -ಸಾಂಬಾರ್, ಪ್ರತಿದಿನ ಒಂದೊಂದು ಮಾದರಿಯ ರೈಸ್ ಬಾತ್ ಜೊತೆಗೆ ಚಟ್ನಿ, ಸಾಂಬಾರ್, ಖಾರಾ ಬೂಂದಿ, ಬಜ್ಜಿ, ಪಲಾವ್, ಬಿಸಿಬೇಳೆ ಬಾತ್, ಕಾರ ಬಾತ್, ಪೊಂಗಲ್, ಭಾನುವಾರ ಚೌ ಚೌ ಬಾತ್ ನೀಡಲಾಗುವುದು. ಬ್ರೆಡ್ ಜಾಮ್, ಮಂಗಳೂರು ಬನ್ಸ್ ಜೊತೆಗೆ ಕಾಫಿ, ಟೀ ನೀಡಲಾಗುವುದು. ಮಧ್ಯಾಹ್ನ ಮತ್ತು ರಾತ್ರಿ ಊಟಕ್ಕೆ ಮುದ್ದೆ, ಚಪಾತಿಯನ್ನು ದಿನ ಬಿಟ್ಟು ದಿನ ನೀಡಲಾಗುತ್ತದೆ. ಇದರೊಂದಿಗೆ ಪ್ರತಿದಿನ ಅನ್ನ -ಸಾಂಬಾರ್ ಮುಂದುವರೆಯಲಿದೆ.