ಬೆಂಗಳೂರು: ಬಡಜನರ ಹಸಿವು ನೀಗಿಸುವ ಉದ್ದೇಶದೊಂದಿಗೆ ನಮ್ಮ ಸರ್ಕಾರದ ಹಿಂದಿನ ಅವಧಿಯಲ್ಲಿ ಜಾರಿಗೆ ತಂದಿದ್ದ ಇಂದಿರಾ ಕ್ಯಾಂಟೀನ್ ಗಳು ಈಗ ಮತ್ತಷ್ಟು ಶುಚಿ, ರುಚಿಯಾಗಿ ಹೊಸ ಬಗೆಯ ಆಹಾರದೊಂದಿಗೆ ಗ್ರಾಹಕರ ಸೇವೆಗೆ ಸಿದ್ಧಗೊಂಡಿವೆ ಎಂದು ಸಿಎಂ ಸಿದ್ಧರಾಮಯ್ಯ ತಿಳಿಸಿದ್ದಾರೆ.
ರಿಯಾಯಿತಿ ದರದಲ್ಲಿ ಸ್ವಾದಿಷ್ಟ ತಿಂಡಿ, ಊಟ ದೊರೆಯುವ ಇಂದಿರಾ ಕ್ಯಾಂಟೀನ್ ಯೋಜನೆಯ ಸಂಪೂರ್ಣ ಸದುಪಯೋಗ ಪಡೆಯಿರಿ ಎಂದು ಹೇಳಿದ್ದಾರೆ.
ಇಂದಿರಾ ಕ್ಯಾಂಟೀನ್ ಗಳಲ್ಲಿ ಅಗ್ಗದ ದರದಲ್ಲಿ ದೇಹಕ್ಕೆ ಒಗ್ಗುವ ಊಟ, ಉಪಹಾರ ನೀಡಲಾಗುತ್ತದೆ.
ಬೆಳಗ್ಗೆ 7ರಿಂದ 10 ಗಂಟೆಯವರೆಗೆ ಇಡ್ಲಿ, ಸಾಂಬಾರ್, ಚಟ್ನಿ, ವೆಜ್ ಪಲಾವ್, ರಾಯಿತಾ, ಬಿಸಿಬೇಳೆ ಬಾತ್, ಬೂಂದಿ, ಪೊಂಗಲ್, ಮಂಗಳೂರು ಬನ್ಸ್ ನೀಡಲಾಗುವುದು. ಪ್ಲೇಟ್ ಗೆ 5 ರೂಪಾಯಿ ದರ ನಿಗದಿಪಡಿಸಲಾಗಿದೆ. ಮಾವಿನಕಾಯಿ ಸೀಸನ್ ನಲ್ಲಿ ಸ್ಪೆಷಲ್ ಮಾವಿನ ಕಾಯಿ ಚಿತ್ರಾನ್ನ ಸಿಗಲಿದೆ.
ಮಧ್ಯಾಹ್ನ 1 ಗಂಟೆಯಿಂದ 3 ಗಂಟೆಯವರೆಗೆ ಪ್ಲೇಟ್ ಗೆ 10 ರೂಪಾಯಿ ದರದಲ್ಲಿ ಊಟ ಸಿಗಲಿದೆ. ಅನ್ನ, ತರಕಾರಿ ಸಾಂಬಾರ್, ರಾಯಿತಾ, ಖೀರು, ಮೊಸರನ್ನ, ರಾಗಿ ಮುದ್ದೆ, ಸೊಪ್ಪಿನ ಸಾರು, ಚಪಾತಿ, ಸಾಗು ಇರಲಿದೆ.
ರಾತ್ರಿ 7.30 ರಿಂದ 9 ಗಂಟೆಯವರೆಗೆ ಪ್ಲೇಟ್ ಗೆ 10 ರೂಪಾಯಿ ದರದಲ್ಲಿ ಅನ್ನ, ತರಕಾರಿ ಸಾಂಬಾರು, ರಾಗಿ ಮುದ್ದೆ, ಸೊಪ್ಪಿನ ಸಾರು, ಚಪಾತಿ, ವೆಜ್ ಗ್ರೇವಿ ನೀಡಲಾಗುವುದು.