ಅಕ್ಟೋಬರ್ 1ರಿಂದ ಆಗ್ರಾ ಹಾಗೂ ಲಕ್ನೋ ನಡುವೆ ವಿಮಾನಯಾನ ಸೇವೆ ಆರಂಭಗೊಳ್ಳಲಿದೆ. ಈ ಮೂಲಕ 4 ಗಂಟೆಗಳ ಪ್ರಯಾಣ ಅವಧಿಯನ್ನು ಕೇವಲ 1 ಗಂಟೆಯಲ್ಲಿ ಕ್ರಮಿಸಬಹುದಾಗಿದೆ.
ಅಂದಹಾಗೆ ಇಂಡಿಗೋ ಕಂಪನಿಯು ಆಗ್ರಾ ಹಾಗೂ ಲಕ್ನೋ ನಡುವೆ ವಿಮಾನಯಾನ ಸೇವೆ ಆರಂಭಿಸುತ್ತಿದೆ. ಆಗ್ರಾ ಖೇರಿಯಾ ವಿಮಾನ ನಿಲ್ದಾಣದ ನಿರ್ದೇಶಕ ಎಎ ಅನ್ಸಾರಿ ಈ ಬಗ್ಗೆ ಮಾಹಿತಿ ನೀಡಿದ್ದು, ಇಂಡಿಗೋ ವಿಮಾನವು ಲಕ್ನೋದ ಅಮೌಸಿ ವಿಮಾನ ನಿಲ್ದಾಣದಿಂದ ಪ್ರತಿದಿನ ಮಧ್ಯಾಹ್ನ 2:45ಕ್ಕೆ ಹೊರಡಲಿದೆ. ಸರಿಯಾಗಿ 1 ಗಂಟೆ ಅವಧಿಯಲ್ಲಿ ಅಂದರೆ 3:45ಕ್ಕೆ ಆಗ್ರಾವನ್ನು ತಲುಪಲಿದೆ. 15 ನಿಮಿಷ ವಿರಾಮದ ಬಳಿಕ ಲಕ್ನೋಗೆ ಸಂಜೆ 4 ಗಂಟೆಗೆ ಹೊರಡಲಿದೆ ಎಂದು ಹೇಳಿದ್ದಾರೆ.
ಆಗ್ರಾದಿಂದ ಲಕ್ನೋಗೆ ವಿಮಾನಯಾನದ ದರ 1999 ರೂಪಾಯಿ ಫ್ಲೆಕ್ಸಿ ಪ್ಲಸ್ ದರ 2314 ರೂಪಾಯಿ ಆಗಿದೆ. ಈ ವಿಮಾನಯಾನ ಸೇವೆಯು ಆಗ್ರಾ ಹಾಗೂ ಲಕ್ನೋ ನಡುವಿನ ಸಂಬಂಧವನ್ನು ಇನ್ನಷ್ಟು ಬಲಗೊಳಿಸಲಿದೆ ಎಂದು ಅಂದಾಜಿಸಲಾಗಿದೆ.
ಪ್ರಸ್ತುತ ಕಾನ್ಪುರದಿಂದ ಹೈದರಾಬಾದ್, ಬೆಂಗಳೂರು, ಮುಂಬೈ, ಹಾಗೂ ದೆಹಲಿಗೆ ನೇರ ವಿಮಾನಯಾನ ಸೇವೆ ಲಭ್ಯವಿದೆ. ಲಕ್ನೋ, ವಾರಣಾಸಿ, ಪ್ರಯಾಗ್ ರಾಜ್, ಗೋರಖ್ಪುರ ಹಾಗೂ ಬರೇಲಿ ಬಳಿಕ ಇದೀಗ ಕಾನ್ಪುರದಲ್ಲೂ ಲಭ್ಯವಿದೆ. ಈ ಸೇವೆಯು ಸೆಪ್ಟೆಂಬರ್ 15ರಿಂದ ಆರಂಭವಾಗಿದೆ.