ನವದೆಹಲಿ: ರಾಷ್ಟ್ರ ರಾಜಧಾನಿಯಿಂದ ಮುಂಬೈಗೆ ತೆರಳುತ್ತಿದ್ದ ಇಂಡಿಗೋ ವಿಮಾನದಲ್ಲಿ ಪ್ರಯಾಣಿಕರೊಬ್ಬರಿಗೆ ನೀಡಲಾಗಿದ್ದ ಸ್ಯಾಂಡ್ ವಿಚ್ ನಲ್ಲಿ ಹುಳು ಕಂಡುಬಂದಿದ್ದು, ವಿಡಿಯೋವನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಳ್ಳಲಾಗಿದೆ. ಈ ಹಿನ್ನೆಲೆಯಲ್ಲಿ ಕ್ಷಮೆಯಾಚಿಸಿರುವ ವಿಮಾನಯಾನ ಸಂಸ್ಥೆಯು ಈ ವಿಷಯವನ್ನು ಕೂಲಂಕಷವಾಗಿ ಪರಿಶೀಲಿಸುತ್ತಿದೆ ಎಂದು ಹೇಳಿದೆ.
ಶುಕ್ರವಾರ ದೆಹಲಿಯಿಂದ ಮುಂಬೈಗೆ 6E 6107 ವಿಮಾನದಲ್ಲಿ ಈ ಘಟನೆ ನಡೆದಿದೆ. ಮಹಿಳಾ ಪ್ರಯಾಣಿಕ ಖುಶ್ಬೂ ಗುಪ್ತಾ ಅವರು ವಿಮಾನದಲ್ಲಿ ಸ್ಯಾಂಡ್ ವಿಚ್ ನಲ್ಲಿ ಹುಳ ಇರುವ ಕಿರು ವೀಡಿಯೊವನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಹಂಚಿಕೊಂಡಿದ್ದಾರೆ.
ವಿಮಾನಯಾನ ಸಂಸ್ಥೆಯ ವಕ್ತಾರರು ಪ್ರತಿಕ್ರಿಯೆ ನೀಡಿ, ದೆಹಲಿಯಿಂದ ಮುಂಬೈಗೆ 6E 6107 ವಿಮಾನದಲ್ಲಿನ ಘಟನೆ ಬಗ್ಗೆ ಏರ್‌ಲೈನ್‌ಗೆ ತಿಳಿದಿದೆ. ತನಿಖೆಯ ನಂತರ, ನಮ್ಮ ಸಿಬ್ಬಂದಿ ನಿರ್ದಿಷ್ಟ ಸ್ಯಾಂಡ್‌ವಿಚ್‌ನ ಸೇವೆಯನ್ನು ತಕ್ಷಣವೇ ನಿಲ್ಲಿಸಿದ್ದಾರೆ. ಸೂಕ್ತ ಕ್ರಮ ತೆಗೆದುಕೊಳ್ಳಲಾಗಿದೆ. ಪ್ರಯಾಣಿಕರ ಯಾವುದೇ ಅನಾನುಕೂಲತೆಗಾಗಿ ನಾವು ಕ್ಷಮೆಯಾಚಿಸುತ್ತೇವೆ ಎಂದು ತಿಳಿಸಿದ್ದಾರೆ.