ನವದೆಹಲಿ: ಹಾರಾಟ ನಡೆಸಿದ್ದ ವಿಮಾನದಲ್ಲಿ ಉಸಿರಾಟದ ಸಮಸ್ಯೆಯಿಂದ ಬಳಲುತ್ತಿದ್ದ ಮಗುವಿನ ಜೀವವನ್ನು ಇಬ್ಬರು ವೈದ್ಯರು ಉಳಿಸಿದ ಘಟನೆ ಬೆಳಕಿಗೆ ಬಂದಿದೆ.
ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದ ಮಗುವನ್ನು ಪೋಷಕರು ಚಿಕಿತ್ಸೆಗಾಗಿ ಇಂಡಿಗೋ ವಿಮಾನದಲ್ಲಿ ದೆಹಲಿಯ ಏಮ್ಸ್ ಗೆ ಕರೆದೊಯ್ಯುತ್ತಿದ್ದರು. ವಿಮಾನ ಹಾರಾಟ ನಡೆಸುತ್ತಿದ್ದಂತೆ ಮಗುವಿಗೆ ಉಸಿರಾಟದ ತೊಂದರೆ ಹೆಚ್ಚಾಗಿದೆ. ಈ ವೇಳೆ ವಿಮಾನ ಸಿಬ್ಬಂದಿಗಳು ಯಾರಾದರೂ ವೈದ್ಯರಿದ್ದರೆ ತಕ್ಷಣ ಮಗುವಿಗೆ ಚಿಕಿತ್ಸೆ ನೀಡುವಂತೆ ಕೇಳಿಕೊಂಡಿದ್ದಾರೆ.
ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಐಎಎಸ್ ಅಧಿಕಾರಿ ಡಾ.ನಿತಿನ್ ಕುಲಕರ್ಣಿ ಹಾಗೂ ರಾಂಚಿ ಸದರ್ ಆಸ್ಪತ್ರೆಯ ವೈದ್ಯರು ಸಹಾಯಕ್ಕೆ ಧಾವಿಸಿದ್ದಾರೆ. ಡಾ.ನಿತಿನ್ ಕುಲಕರ್ಣಿ ತರಬೇತಿಯಿಂದ ವೈದ್ಯರಾಗಿದ್ದಾರೆ. ಸದರ್ ಆಸ್ಪತ್ರೆಯ ವೈದ್ಯರೂ ಸೇರಿ ಇಬ್ಬರೂ ಮಗುವಿಗೆ ತುರ್ತು ವೈದ್ಯಕೀಯ ಔಷಧಿ, ಚುಚ್ಚು ಮದ್ದು, ಆಮ್ಲಜನಕ ನೀಡಿ ನೆರವಾಗಿದ್ದಾರೆ.
ಆರಂಭದ 15-20 ನಿಮಿಷಗಳ ಕಾಲ ಮಗುವಿನ ಸ್ಥಿತಿ ನಿರ್ಣಾಯಕವಾಗಿತ್ತು. ಬಳಿಕ ಮಗು ಸಹಜ ಸ್ಥಿತಿಗೆ ಬಂದಿತು. ಮಗು ಹುಟ್ಟುತ್ತಲೇ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ದೆಹಲಿ ಏಮ್ಸ್ ಆಸ್ಪತ್ರೆಗೆ ಕರೆದೊಯ್ಯಲಾಗಿದೆ ಎಂದು ವೈದ್ಯರು ತಿಳಿಸಿದ್ದಾರೆ.
ಇನ್ನು ವಿಮಾನದಲ್ಲಿ ಮಗುವಿನ ಜೀವ ಉಳಿಸಿದ ಡಾ.ನಿತೀಶ್ ಕುಲಕರ್ಣಿ ಪ್ರಸ್ತುತ ಜಾರ್ಖಂಡ್ ರಾಜ್ಯಪಾಲರ ಪ್ರಧಾನ ಕಾರ್ಯದರ್ಶಿಯಾಗಿದ್ದಾರೆ. ರಾಂಚಿಯ ಸದರ್ ಆಸ್ಪತ್ರೆಯ ಡಾ.ಮೊಝಮ್ಮಿಲ್ ಫೆರೋಜ್ ಕೂಡ ಮಗುವಿಗೆ ತುರ್ತು ಚಿಕಿತ್ಸೆ ನೀಡಿ ನೆರವಾದರು.